ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿಯ ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಕೆಗೆ ಸಹಾಯ ಮಾಡುತ್ತಿದ್ದ ಆಪ್ತನು ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತ ಮಹಿಳೆಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಎಂದು ಗುರುತಿಸಲಾಗಿದೆ. ಫ್ಯಾಶನ್ ಡಿಸೈನರ್ ಆಗಿರುವ ದೀಪಾ, ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿ ಬಳಿಕ ಹನಿಟ್ರ್ಯಾಪ್ ಮಾಡುತ್ತಿದ್ದಳು ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿಯಾದ ಶಿವಾನಂದ್ ಮಠಪತಿ ಎಂಬಾತ ದೀಪಾಗೆ ಸಹಾಯ ಮಾಡುತ್ತಿದ್ದನು. ಯಾವ ಶ್ರೀಮಂತ ವ್ಯಕ್ತಿಗಳನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯನ್ನು ಶಿವಾನಂದ್ ನೀಡುತ್ತಿದ್ದನು. ಹೀಗೆ ಬಂದ ಹಣವನ್ನು ಇಬ್ಬರೂ ಸೇರಿ ಖರ್ಚು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಒಬ್ಬ ಉದ್ಯಮಿಯನ್ನು ಇದೇ ರೀತಿ ಲಾಡ್ಜ್‌ಗೆ ಕರೆಸಿಕೊಂಡು ವಂಚನೆ ಮಾಡಿದ ನಂತರ ಉದ್ಯಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ಬೆಳಗಾವಿಯ ಹೋಟೆಲ್‌ನಲ್ಲಿ ಕಾರ್ಯಾಚರಣೆ ನಡೆಸಿ ದೀಪಾಳನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಆಕೆಯ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.
ಬಂಧಿತೆ ದೀಪಾ ಬಳಿಯಿಂದ ಒಂದು ಫಾರ್ಚುನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್‌ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರು ಕೀಗಳು ಹಾಗೂ ₹14 ಸಾವಿರ ನಗದು ಸೇರಿ ಒಟ್ಟು ಸುಮಾರು ₹32.86 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಶನಿ ದೇವರ ಮೂರ್ತಿ ಎಂದು ಪೂಜಿಸುತ್ತಿದ್ದ ಕಲ್ಲು ವಾಸ್ತವದಲ್ಲಿ ವೀರಗಲ್ಲು: ಪತ್ತೆ ಹಚ್ಚಿದ ವಿಧ್ಯಾರ್ಥಿನಿ
ಟಿಳಕವಾಡಿ ಠಾಣೆಯ ಇನ್‌ಸ್ಪೆರ್ಕ್ಟ ಪರಶುರಾಮ ಪೂಜೇರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಪರಾರಿಯಾದ ಶಿವಾನಂದ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ತನಿಖೆ ನಡೆಯುತ್ತಿದೆ.




