ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ಕಬ್ಬು ದರ ಹೆಚ್ಚಳಕ್ಕಾಗಿ ನಡೆದಿದ್ದ ರೈತರ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಬಂಧಿತರಿಬ್ಬರು ಹುಕ್ಕೇರಿ ತಾಲೂಕಿನ ಹೆಬ್ಬಾಳದ ಚನ್ನಗೌಡ ಸಸಾಲಟ್ಟಿ, ಪ್ರಶಾಂತ ಮುಗಳಿ, ವಿನಾಯಕ ಕೋಟಿವಾಲಿ, ಉಳ್ಳಾಗಡ್ಡಿಯ ಮಲ್ಲಪ್ಪ ಘಟಗಿ, ಕಾಕತಿಯ ಶಿವಪ್ಪ ವಾಣಿ, ಹಾಗೂ ಬಿದ್ರೆವಾಡಿಯ ಸೋಮನಾಥ ಹಿರೇಮಠ ಎಂಬವರು.
ಘಟನೆಯ ಹಿನ್ನೆಲೆ
ರೈತರು ಪ್ರತಿ ಟನ್ ಕಬ್ಬಿಗೆ ₹3,300 ದರ ನೀಡಬೇಕೆಂದು ಆಗ್ರಹಿಸಿ ಟೋಲ್ ನಾಕಾ ಬಳಿ ಪ್ರತಿಭಟಿಸುತ್ತಿದ್ದರು. ಈ ವೇಳೆ ಉದ್ವಿಗ್ನತೆ ಉಂಟಾಗಿ ಕೆಲವರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದರು. ಘಟನೆಯಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳು, ಹಾಗೂ ಪೊಲೀಸ್ ಇಲಾಖೆಯ ಎರಡು ಬಸ್‌ಗಳು ಹಾನಿಗೊಳಗಾದವು. ಒಟ್ಟು 12 ಮಂದಿ ಪೊಲೀಸರು ಗಾಯಗೊಂಡಿದ್ದರು.
ತನಿಖೆ ಮತ್ತು ಬಂಧನ
ಘಟನಾ ಸ್ಥಳದ ಸಿ.ಸಿ.ಟಿ.ವಿ ದೃಶ್ಯಾವಳಿ, ವೀಡಿಯೋ ಸಾಕ್ಷ್ಯಗಳು ಹಾಗೂ ಸ್ಥಳ ಪರಿಶೀಲನೆ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಅವರ ವಿರುದ್ಧ ದೊಂಬಿ, ಗುಂಪುಗಲಭೆ, ಮಾರಣಾಂತಿಕ ಹಲ್ಲೆ ಸೇರಿದಂತೆ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದರು.





