ಕಳೆದ ಕೆಲ ದಿನಗಳಿಂದ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಕ್ಷೇತ್ರದ ಜನರ ಆಶೀರ್ವಾದ ಇರುವವರೆಗೆ ವಿರೋಧಿಗಳ ಕುತಂತ್ರಗಳು ಫಲಿಸುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೇಳಿದರು.
ಅಥಣಿಯಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈವರೆಗೆ ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಆದರೆ ಬೇಕೆಂದೇ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ತಾಲೂಕಿನಲ್ಲಿ ಒಂದು ತಂಡ ನಿರಂತರವಾಗಿ ನಮ್ಮ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ನಮಗೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್ ಯುನಿಯನ್ ಅಧ್ಯಕ್ಷರು ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಘಟನೆಯ ಬಳಿಕ ಬೇಕೆಂದೇ ಅವರನ್ನು ಬೆಳಗಾವಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಗೂ ಮುನ್ನವೇ ಒಂದು ತಂಡ ಅಲ್ಲಿಗೆ ಹಾಜರಿದ್ದಿತು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಇದು ಪೂರ್ವನಿಯೋಜಿತ ಹಾಗೂ ವ್ಯವಸ್ಥಿತ ಷಡ್ಯಂತ್ರವಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಪ್ರಚಾರ ನಡೆಯುವ ಸಾಧ್ಯತೆ ಇದೆ. ಜಾತಿ–ಜಾತಿಗಳ ನಡುವೆ ಜಗಳ ಹಚ್ಚುವ ಪ್ರಯತ್ನಗಳೂ ನಡೆಯಬಹುದು. ಈ ಎಲ್ಲದರ ಕುರಿತು ನಮಗೆ ಪೂರ್ಣ ಅರಿವು ಇದೆ. ಕ್ಷೇತ್ರದ ಜನರ ಆಶೀರ್ವಾದ ನಮ್ಮ ಮೇಲಿರುವವರೆಗೆ ಯಾರಿಂದಲೂ ನಮಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದರು.




