ಬೆಳಗಾವಿ ಜಿಲ್ಲೆಯ ಬೆಳವಡಿ ಗ್ರಾಮದಲ್ಲಿ ಶತಮಾನಗಳಿಂದ ಶನಿ ದೇವರ ಮೂರ್ತಿ ಎಂದು ಪೂಜಿಸುತ್ತಿದ್ದ ಕಲ್ಲು ವಾಸ್ತವದಲ್ಲಿ ಐತಿಹಾಸಿಕ ವೀರಗಲ್ಲು ಎಂದು ಪತ್ತೆಯಾಗಿದೆ. ಈ ಮಹತ್ವದ ಐತಿಹಾಸಿಕ ಕುರುಹನ್ನು 9ನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮೀ ಪ್ರಕಾಶ ಹುಂಬಿ ಗುರುತಿಸಿದ್ದಾಳೆ.
ಪ್ರತಿದಿನ ದೇವಸ್ಥಾನಕ್ಕೆ ಬರುತ್ತಿದ್ದ ಲಕ್ಷ್ಮೀ ಇತ್ತೀಚೆಗೆ ಕಲ್ಲಿನ ಮೂರ್ತಿಯನ್ನು ಸ್ವಚ್ಛಗೊಳಿಸಿದಳು. ಶಾಲೆಯಲ್ಲಿ ಕಲಿತ ಇತಿಹಾಸದ ಪಾಠದೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಅದು ವೀರಗಲ್ಲು ಇರಬಹುದು ಎಂಬ ಅನುಮಾನ ಅವಳಿಗೆ ಮೂಡಿತು. ಈ ಕುರಿತು ತಂದೆಗೆ ತಿಳಿಸಿದ ಬಳಿಕ ಗ್ರಾಮ ಹಿರಿಯರು ಪರಿಶೀಲನೆ ನಡೆಸಿದಾಗ ಅದು ಐತಿಹಾಸಿಕ ವೀರಗಲ್ಲು ಎಂಬುದು ಸ್ಪಷ್ಟವಾಗಿದೆ.
ಬೆಳವಡಿ ಸಂಸ್ಥಾನ ಹಾಗೂ ದೇಸಗತಿಗಳ ಕುರಿತು ಪಿಎಚ್‌ಡಿ ಮಾಡಿರುವ ಬಾಳಪ್ಪ ಈರಪ್ಪ ಚಿನಗುಡಿ ಮಾತನಾಡಿ, “ವೀರಗಲ್ಲು ಪತ್ತೆ ಹಚ್ಚಿದ ಬಾಲಕಿಯ ಪ್ರಜ್ಞೆ ಪ್ರಶಂಸನೀಯ. ಆದರೆ ಇದು ಬೆಳವಡಿ ಮಲ್ಲಮ್ಮನಿಗೆ ಸಂಬಂಧಪಟ್ಟದ್ದು ಅಲ್ಲ. ಸಂಸ್ಥಾನದ ವೀರನೊಬ್ಬನ ಸ್ಮರಣಾರ್ಥ ನಿರ್ಮಿಸಲಾದ ವೀರಗಲ್ಲು” ಎಂದು ತಿಳಿಸಿದ್ದಾರೆ. ಶಾಸನ ತಜ್ಞರಾದ ಹನುಮಾಕ್ಷಿ ಗೋಗಿ ಮತ್ತು ಲಕ್ಷ್ಮಣ ತೇಲಗಾವಿ ಅವರೂ ಇದನ್ನು ಖಚಿತಪಡಿಸಿದ್ದಾರೆ.
ಸುಮಾರು 12 ಅಥವಾ 13ನೇ ಶತಮಾನದ ಈ ವೀರಗಲ್ಲು ಮೂರು ಭಾಗಗಳನ್ನು ಹೊಂದಿದೆ. ಕೆಳಭಾಗದಲ್ಲಿ ಗೋವುಗಳನ್ನು ರಕ್ಷಿಸಲು ವೀರನು ಯುದ್ಧ ಮಾಡುತ್ತಿರುವ ದೃಶ್ಯ ಕೆತ್ತಲಾಗಿದೆ. ಎರಡನೇ ಭಾಗದಲ್ಲಿ ವೀರಮರಣ ಹೊಂದಿದ ಯೋಧನನ್ನು ವಿಮಾನದಲ್ಲಿ ಕುಳ್ಳಿರಿಸಿ ಅಪ್ಸರೆಯರು ಸಂಗೀತ ಹಾಗೂ ನೃತ್ಯದೊಂದಿಗೆ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಿರುವ ಕೆತ್ತನೆ ಇದೆ. ಮೇಲ್ಬಾಗದಲ್ಲಿ ಶಿವಲಿಂಗ, ನಂದಿ ಮತ್ತು ದೇವಧೂತರು ಪೂಜೆ ಸಲ್ಲಿಸುವ ದೃಶ್ಯಗಳಿವೆ. ಎಡ-ಬಲ ಭಾಗಗಳಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳು ಕೆತ್ತಲಾಗಿದ್ದು, ವೀರನ ಸಾಹಸ ಶಾಶ್ವತ ಎಂಬುದನ್ನು ಸೂಚಿಸುತ್ತವೆ.
ಈ ಸುದ್ದಿ ಓದಿದ್ದಿರಾ ? ಹೋಳಿ ಸಂಭ್ರಮದಲ್ಲಿ ಅಸಭ್ಯ ಗೀತೆಗಳಿಗೆ ನೃತ್ಯ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮನವಿ
ವೀರಗಲ್ಲಿನ ಮಧ್ಯಭಾಗದಲ್ಲಿ ಶ್ಲೋಕಗಳು ಅಥವಾ ವಿವರಣೆಗಳು ಇದ್ದರೂ ಅವು ಕಾಲಕ್ರಮೇಣ ನಾಶವಾಗಿರುವುದರಿಂದ ಓದಲು ಸಾಧ್ಯವಾಗುತ್ತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.




