ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ, ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ನಿನ್ನೆ ಈ ಪ್ರಕರಣದಲ್ಲಿ 12 ಮಂದಿ ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದ್ದ ಬೆಳಗಾವಿಯ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಇಂದು ಎಲ್ಲ ಅಪರಾಧಿಗಳಿಗೆ ತಲಾ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶರಾದ ಎಚ್.ಎಸ್. ಮಂಜುನಾಥ್ ಅವರು ಕೋರ್ಟ್ ಹಾಲ್‌ನಲ್ಲೇ ವಿವಿಧ ಸೆಕ್ಷನ್‌ಗಳ ಅಡಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು.
ಈ ಪ್ರಕರಣದಲ್ಲಿ ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಿಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ, ಗಂಗವ್ವ ನಾಯಿಕ, ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ, ಶೋಭಾ ನಾಯಿಕ, ಲಕ್ಕವ್ವ ನಾಯಿಕ ಮತ್ತು ಶಿವಪ್ಪ ವನ್ನೂರಿ ದೋಷಿಗಳೆಂದು ಸಾಬೀತಾಗಿದ್ದು, ಪ್ರತಿಯೊಬ್ಬರೂ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೊಳಪಟ್ಟಿದ್ದಾರೆ. ಇನ್ನೋರ್ವ ಬಾಲಾಪರಾಧಿ ಕುರಿತು ವಿಚಾರಣೆ ಮುಂದವರಿದಿದೆ.
ವಂಟಮೂರಿಯಲ್ಲಿ 2023 ಡಿಸೆಂಬರ್ 11 ರಂದು ಈ ಅಮಾನವೀಯ ಘಟನೆ ನಡೆದಿತ್ತು. ಪ್ರೀತಿಸಿದ ಯುವತಿಯೊಂದಿಗೆ ಯುವಕ ಮನೆ ಬಿಟ್ಟು ಪರಾರಿ ಆಗಿದ್ದಾನೆಂಬ ಕಾರಣಕ್ಕೆ ಪ್ರತೀಕಾರವಾಗಿ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಅಲ್ಲದೇ ಯುವಕನ ಮನೆಯನ್ನು ಧ್ವಂಸ ಮಾಡಿ ಅಟ್ಟಹಾಸ ಮೆರೆದಿದ್ದರು. ಇದು ಇಡೀ ದೇಶಾದ್ಯಂತ ತೀವ್ರ ಟೀಕೆಗೆ ಕಾರಣವಾಗಿತ್ತು. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2023ರ ಡಿ.16ರಂದು ಪ್ರಕರಣದ ಸಿಐಡಿಯ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ವಹಿಸಲಾಗಿತ್ತು. ಆಗ ಸಿಐಡಿ ವಿಶೇಷ ವಿಚಾರಣೆ ವಿಭಾಗದ ಪೊಲೀಸ್ ಅಧೀಕ್ಷಕರಾಗಿದ್ದ ಪೃಥ್ವಿಕ್ ಶಂಕರ್ ಅವರು ತನಿಖಾಧಿಕಾರಿಯಾಗಿ ಕೆಲಸ ಮಾಡಿ, 2024ರ ಎಪ್ರಿಲ್ 22ರಂದು 13 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 92 ಸಾಕ್ಷಿದಾರರನ್ನು ಉಲ್ಲೇಖಿಸುವ ಜತೆಗೆ, ವಶಕ್ಕೆ ಪಡೆದ 37 ವಸ್ತುಗಳನ್ನು ಸಾಕ್ಷ್ಯಗಳನ್ನಾಗಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಳಗಾವಿ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಎಸ್. ಮಂಜುನಾಥ ಅವರು 12 ಆರೋಪಿಗಳು ತಪ್ಪಿತಸ್ಥರೆಂದು ನಿನ್ನೆಯಷ್ಟೇ ತೀರ್ಪು ಪ್ರಕಟಿಸಿ, ಶಿಕ್ಷೆ ಪ್ರಮಾಣವನ್ನು ಇಂದು ಕಾಯ್ದಿರಿಸಿದ್ದರು.





