ರೈತರು, ರಾಜಕೀಯವಾಗಿ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಇದರಿಂದ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಿದ್ದಾರೆ. ಹಾಗಾಗಿ ರೈತರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸರ್ಕಾರ ಕೂಡಲೇ ಬಾಕಿ ಬಿಲ್ ಪಾವತಿಸುವಂತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ರಾಜ್ಯದ ಬಹುತೇಕ ಐತಿಹಾಸಿಕ ರೈತ ಹೋರಾಟಗಳಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌ನಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟವೂ ಒಂದು. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡಬೇಕೆಂಬ ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟುಕೊಂಡು ರೈತರು 9 ದಿನಗಳ ಕಾಲ ಅಹೋರಾತ್ರಿ ಹೋರಾಟ ನಡೆಸಿದ್ದರು.
ಆದರೆ, ಕಬ್ಬು ಕಳುಹಿಸಿ ನಾಲ್ಕು ತಿಂಗಳು ಕಳೆದರೂ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ಪಾವತಿಸಿಲ್ಲ. ರಾಜ್ಯದಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೇ 29 ಸಕ್ಕರೆ ಕಾರ್ಖಾನೆಗಳಿವೆ. ಈ 81 ಕಾರ್ಖಾನೆಗಳು 550 ಲಕ್ಷ ಟನ್ ಕಬ್ಬು ನುರಿಸಿ 47.35 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಇದರಲ್ಲಿ ಕೆಲವೇ ಕಾರ್ಖಾನೆಗಳು ಮಾತ್ರ ರೈತರಿಗೆ ಹಣ ಪಾವತಿಸಿದ್ದು, ಇನ್ನೂ ₹4,741 ಕೋಟಿ ಬಾಕಿ ಉಳಿಸಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿವೆ. ಈ ಕಾರಣಕ್ಕಾಗಿಯೇ ರೈತರು ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ.
ʼನಾವು ರೈತರಾಗಿ ಹುಟ್ಟಿದ್ದೇ ತಪ್ಪಾ? ನಮ್ಮ ಹಣವನ್ನು ನಾವು ಪಡೆಯಲು ಹೋರಾಟ ಮಾಡಬೇಕೇʼ ಎಂಬ ಪ್ರಶ್ನೆ ರಾಜ್ಯದ ಕಬ್ಬು ಬೆಳೆಗಾರರಲ್ಲಿ ಮೂಡಿದೆ. ಗುರ್ಲಾಪೂರ ಮಾದರಿಯಲ್ಲೇ ಮತ್ತೆ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ʼರೈತರಿಗೆ ಕಬ್ಬಿನ ಬಿಲ್ ಪಾವತಿಸದೆ ನಿಯಮವನ್ನು ಗಾಳಿಗೆ ತೂರುವ ಸಕ್ಕರೆ ಕಾರ್ಖಾನೆಗಳ ಮೇಲೆ ಸರ್ಕಾರಕ್ಕೆ ಏಕಿಷ್ಟು ಪ್ರೀತಿʼ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
“ಖರ್ಚು ಮಾಡಿ ಕಬ್ಬು ಬೆಳೆದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಕೆಲವರಿಗೆ ಮಕ್ಕಳ ಮದುವೆಗೂ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೆಲವರು ಬ್ಯಾಂಕ್‌ನಲ್ಲಿ ಬಂಗಾರವನ್ನು ಗಿರವಿ ಇಟ್ಟು ಸಾಲ ಪಡೆದಿದ್ದು, ಕಾರ್ಖಾನೆಗಳಿಂದ ಹಣ ಸಿಗದಿರುವ ಕಾರಣ ಬಂಗಾರವನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರ್ಲಾಪೂರ ಕಬ್ಬು ಬೆಳೆಗಾರರ ಹೋರಾಟದ ನೇತೃತ್ವವಹಿಸಿದ್ದ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿ 4 ತಿಂಗಳು ಕಳೆದರೂ ರೈತರಿಗೆ ಹಣ ನೀಡಿಲ್ಲ. ಸುಮಾರು 20 ಲಕ್ಷ ಮಂದಿ ರೈತರ ನಾಲ್ಕು ಸಾವಿರ ಕೋಟಿಗಿಂತ ಹೆಚ್ಚು ರೂ. ಬಾಕಿ ಉಳಿದಿದೆ. ಕಾನೂನಿನ ಪ್ರಕಾರ 14 ದಿನಗಳಲ್ಲಿ ಹಣ ನೀಡಬೇಕು. ಆದರೆ ಸರ್ಕಾರ ಕ್ರಮ ಕೈಗೊಂಡಿಲ್ಲ. ರೈತರು ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬದುಕಬೇಕೆಂದರೆ ತಕ್ಷಣ ಕಬ್ಬಿನ ಬಿಲ್ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ನಾವು ರೈತರಾಗಿ ಹುಟ್ಟಿದ್ದೇ ತಪ್ಪಾಗಿದೆ

ಈ ಕುರಿತು ರೈತ ಸಂಘಟನೆಯ ಸತ್ಯಪ್ಪ ಮಾತನಾಡಿ, “ನಾವು ರೈತರಾಗಿ ಹುಟ್ಟಿದ್ದೇ ತಪ್ಪಾಗಿದೆ ಅನ್ನಿಸುವಂತಾಗಿದೆ. ಕಬ್ಬಿನ ಬೆಲೆ ಹೆಚ್ಚಿಸಿಕೊಳ್ಳಲು ಹೋರಾಟ ಮಾಡಬೇಕು, ಬಾಕಿ ಬಿಲ್ ಪಡೆಯಲು ಮತ್ತೆ ಹೋರಾಟ ಮಾಡಬೇಕು. ನಮ್ಮ ರೈತರ ಜೀವನ ಯಾಕೆ ಹೀಗೆ ಆಗಿದೆ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ನಾಯಕರ ವಿರುದ್ಧ ಟೀಕೆ ಮಾಡಿದ ಅವರು, “ನಾವು ಮತ ನೀಡಿ ಕಳುಹಿಸಿದವರು ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ, ಯಾವುದೇ ಪಕ್ಷದವರಾಗಿರಲಿ ಇವರಿಂದಲೇ ರೈತರಿಗೆ ಈ ಪರಿಸ್ಥಿತಿ ಬಂದಿದೆ” ಎಂದು ಗಂಭೀರವಾಗಿ ಆರೋಪಿಸಿದರು.
“ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ರಾಜಕಾರಣಿಗಳಿಗೆ ಇನ್ನು ಮುಂದೆ ನಾವು ಮತ ನೀಡಬಾರದೆಂಬ ತೀರ್ಮಾನಕ್ಕೆ ಬಂದಿದ್ದೇವೆ. ನಾವು ಮತ ನೀಡಿ ಸಚಿವರನ್ನಾಗಿಸಿದ ಸಕ್ಕರೆ ಸಚಿವರಿಂದಲೇ ನಮ್ಮ ಪರಿಸ್ಥಿತಿ ಹದಗೆಟ್ಟಿದೆ. ಕಾರ್ಖಾನೆಗಳು ಕಬ್ಬಿನ ಬಿಲ್ ನೀಡದಿದ್ದರೆ ಲೈಸೆನ್ಸ್ ರದ್ದುಮಾಡುವಂತಹ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ಸಕ್ಕರೆ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, “ರೈತರು ಸಂಕಷ್ಟದಲ್ಲಿದ್ದಾರೆ. ಕಬ್ಬಿನ ಬಿಲ್ ಕೊಡಿಸದಿದ್ದರೆ ನಿಮ್ಮನ್ನು ಮನೆಗೆ ಕಳುಹಿಸಿ ಮಾಜಿ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ರೈತ ಸಂಘಟನೆಯ ಜಗದೀಶ ದೇವರಡ್ಡಿ ಈ ದಿನ.ಕಾಮ್ ಜತೆ ಮಾತನಾಡಿ, “ಕಬ್ಬು ಕಳುಹಿಸಿ 4 ತಿಂಗಳುಗಳಾಗಿವೆ. ರಾಜ್ಯದ 3 ಕಾರ್ಖಾನೆಗಳು ಮಾತ್ರ ಕಬ್ಬಿನ ಬಿಲ್ ಪಾವತಿಸಿವೆ. ಆದರೆ ಇನ್ನುಳಿದ ಕಾರ್ಖಾನೆಗಳು ಬಿಲ್ ಪಾವತಗಿಸಿಲ್ಲ. ಬಾಕಿ ಬಿಲ್ ಪಾವತಿಸುವಂತೆ ಸಾಕಷ್ಟು ಮನವಿ ಮಾಡಿದ್ದರೂ ಬಿಲ್ ನೀಡುತ್ತಿಲ್ಲ. ಈ ಕಾರಣಕ್ಕಾಗಿ ಹೋರಾಟವನ್ನು ಮುಂದುವರೆಸಿದ್ದೇವೆ. ಒಂದು ವೇಳೆ ಕಬ್ಬಿನ ಬಿಲ್ ನೀಡದಿದ್ದರೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ. ಮರ್ಯಾದೆಯಿಂದ ಅವರು ಬಿಲ್ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ” ಎಂದು ತಿಳಿಸಿದರು.
ಕಬ್ಬಿನ ಬಾಕಿ ಬಿಲ್ ಸಮಸ್ಯೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ನೇರವಾಗಿ ಸರ್ಕಾರ ಮತ್ತು ರಾಜಕೀಯ ನಾಯಕರ ವಿರುದ್ಧ ರೈತರ ಅಸಮಾಧಾನ ವ್ಯಕ್ತವಾಗುತ್ತಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂಬ ಭಾವನೆ ಗಾಢವಾಗುತ್ತಿದೆ. ಸಕ್ಕರೆ ಕಾರ್ಖಾನೆಗಳ ಜತೆಗಿನ ರಾಜಕೀಯ ಸಂಪರ್ಕವೇ ಕ್ರಮ ಕೈಗೊಳ್ಳುವುದನ್ನು ತಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಇದನ್ನೂ ಓದಿದ್ದೀರಾ? ಕಲಬುರಗಿ | ಸೌಹಾರ್ದ ಯುಗಾದಿ, ರಂಜಾನ್ ಸಂಭ್ರಮ: ಏಕತೆ, ಸಹಬಾಳ್ವೆಯ ಸಂದೇಶ ಸಾರಿದ ವಿಶೇಷ ಆಚರಣೆ
ಈ ಹಿನ್ನೆಲೆಯಲ್ಲಿ, ರೈತರು, ರಾಜಕೀಯವಾಗಿ ಎಚ್ಚರಿಕೆಯಿಂದ ನಡೆದುಕೊಳ್ಳುವ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಇದರಿಂದ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ರೈತರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸರ್ಕಾರ ಕೂಡಲೇ ಬಾಕಿ ಬಿಲ್ ಪಾವತಿಸುವಂತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.





