ಜಾಗೃತ ಮಹಿಳಾ ಒಕ್ಕೂಟದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ವರ್ಷ “ನರೇಗಾ ಹೊಸ ಕಾಯ್ದೆ – ಮಹಿಳೆಯರ ಉದ್ಯೋಗ ಕಸಿದುಕೊಳ್ಳುವ ಹುನ್ನಾರ!” ಎಂಬ ಘೋಷಣೆಯಡಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೀಡಿ ಗ್ರಾಮದಲ್ಲಿ ಪ್ರತಿಭಟನೆ ಹಾಗೂ ಜಾಗೃತಿ ಸಭೆಯ ಮೂಲಕ ಆಚರಿಸಲಾಯಿತು.
ಹಳ್ಳಿಗಳಿಂದ ಸಾವಿರಾರು ಮಹಿಳೆಯರು, ಕೂಲಿಕಾರ್ಮಿಕರು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಹೊಸ ಕಾಯ್ದೆಯ ಅಂಶಗಳು ಮಹಿಳೆಯರ ಉದ್ಯೋಗ ಅವಕಾಶಗಳನ್ನು ಕಡಿಮೆ ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿದರು. ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹಾಗೂ ಉದ್ಯೋಗ ಭದ್ರತೆಗೆ ಒತ್ತಾಯಿಸಿ ಈ ಕಾರ್ಯಕ್ರಮವನ್ನು ಮಹಿಳಾ ಪ್ರತಿರೋಧದ ದಿನಾಚರಣೆಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೀಡಿ ಕನ್ನಡ ಶಾಲೆಯಿಂದ ಜಾಥಾ ಹೊರಟು ರಾಯಣ್ಣ ಸರ್ಕಲ್‌ನಲ್ಲಿ ಮಾನವ ಸರಪಳಿ ರಚಿಸಿ ಘೋಷಣೆಗಳು ಹಾಗೂ ಹಾಡುಗಳ ಮೂಲಕ ಪ್ರತಿಭಟನೆ ನಡೆಸಲಾಯಿತು. ಸುಮಾರು ಅರ್ಧ ಗಂಟೆ ಕಾಲ ಕಿತ್ತೂರು-ಅಲ್ನಾವರ-ಖಾನಾಪುರ ಮುಖ್ಯ ರಸ್ತೆಯನ್ನು ತಡೆದು ಬಳಿಕ ಜ್ಞಾನೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬರಹಗಾರ್ತಿ ಹಾಗೂ ಹೋರಾಟಗಾರ್ತಿ ಕೆ. ನೀಲಾ ಅವರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಹಿಳೆಯರ ಘನತೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಮಹಿಳೆಯರು ಪಡೆದ ಆತ್ಮಗೌರವದ ಬಗ್ಗೆ ಮಾತನಾಡಿದರು. ಹೊಸ ಕಾಯ್ದೆಗಳು ಮಹಿಳೆಯರ ಕೆಲಸದ ಅವಕಾಶಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪರಿಸರವಾದಿ ಡಾ. ಶಿವಾಜಿ ಕಾಗಣೇಕರ, ನವಜೀವನ ಮಹಿಳಾ ಒಕ್ಕೂಟದ ಮೋಕ್ಷಮ್ಮ ಹಾಗೂ ಜಾಗೃತ ಮಹಿಳಾ ಒಕ್ಕೂಟದ ಅಧ್ಯಕ್ಷೆ ರುಕ್ಷ್ಮಿಣಿ ಸುತಾರ ಅವರು ಸಹ ಮಹಿಳೆಯರ ಹಕ್ಕುಗಳು ಮತ್ತು ಸಮಾನ ಅವಕಾಶಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ವೇಳೆ “ಯುದ್ಧ ಬೇಡ – ಶಾಂತಿ ಬೇಕು” ಎಂಬ ಸಂದೇಶದೊಂದಿಗೆ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಸಾವನ್ನಪ್ಪಿದ ಮಕ್ಕಳ ಆತ್ಮಶಾಂತಿಗಾಗಿ ಮೌನಾಚರಣೆ ನಡೆಸಲಾಯಿತು.
ಈ ಪ್ರತಿಭಟನೆ ಮತ್ತು ಸಭೆಯಲ್ಲಿ ಸಾವಿರಾರು ಮಹಿಳೆಯರು ಹಾಗೂ ಕಾರ್ಮಿಕರು ಭಾಗವಹಿಸಿ ಮಹಿಳೆಯರ ಹಕ್ಕುಗಳ ಪರ ಒಗ್ಗಟ್ಟಿನ ಧ್ವನಿಯನ್ನು ಎತ್ತಿದರು.




