ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಮಾಣಿಕವಾಡಿ ಗ್ರಾಮದ ಕಾರ್ಮಿಕ ಯುವಕ ವೆಂಕಪ್ಪ ಮೈಯೆಕರ್ (18) ಹೋಟೆಲ್ ಮಾಲೀಕರ ಹಲ್ಲೆಯಿಂದ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಮೂರು ತಿಂಗಳಿನಿಂದ ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಆಗಸ್ಟ್ 20ರಂದು ಕಳ್ಳತನ ಆರೋಪ ಮಾಡಲಾಗಿತ್ತು. ಹೋಟೆಲ್ ಮಾಲೀಕ ನಾಗೇಶ್ ಗುಂಡು ಬೆಡರೆ ಹಾಗೂ ಸಹೋದರ ವಿಜಯ್ ಬೆಡರೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪವಿದೆ.
ಗಂಭೀರವಾಗಿ ಗಾಯಗೊಂಡ ವೆಂಕಪ್ಪನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಘಟನೆಯ ನಂತರ ಹೋಟೆಲ್ ಮಾಲೀಕರು ಪೋಷಕರಿಗೆ ₹10 ಸಾವಿರ ನೀಡಿ ದೂರು ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪೋಷಕರು ಹೆದರಿದ ಕಾರಣದಿಂದ ದೂರು ನೀಡಲು ಹಿಂಜರಿದಿದ್ದರು.
ಆದರೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಖಾನಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇದೀಗ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.





