ಬೆಳಗಾವಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ–48 ರಿಂದ ಧರ್ಮವೀರ ಸಂಭಾಜಿ ವೃತ್ತದವರೆಗೆ 2.03 ಕಿ.ಮೀ ಉದ್ದದ ಮೇಲೇತುವೆ ನಿರ್ಮಾಣಕ್ಕೆ ₹275.53 ಕೋಟಿ ವೆಚ್ಚದ ಯೋಜನೆಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಯಿಂದ ಬೆಳಗಾವಿ ನಗರದ ಪ್ರಮುಖ ಮಾರ್ಗದಲ್ಲಿ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
ಬೆಳಗಾವಿ ಜಿಲ್ಲೆ ರಾಯಬಾಗ ಮತ್ತು ಚಿಕ್ಕೋಡಿ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಕೃಷ್ಣಾ ನದಿಯಿಂದ ನೀರನ್ನು ಎತ್ತಿ ರಾಯಬಾಗ ವಿತರಣಾ ಕಾಲುವೆ ಮೂಲಕ ಹರಿಸುವ ₹210 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಒಪ್ಪಿಗೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೂರು ಏತ ನೀರಾವರಿ ಯೋಜನೆಯ ₹1,503 ಕೋಟಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಅನುಮೋದನೆ.
ಚಿಕ್ಕೋಡಿ ಶಾಖಾ ಕಾಲುವೆಗೆ ನೀರು ಹರಿಸುವ ₹198.90 ಕೋಟಿ ವೆಚ್ಚದ ಶ್ರೀಕರಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಗ್ರೀನ್ ಸಿಗ್ನಲ್.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಜಿಟಿಟಿಸಿ (GTTC) ಸ್ಥಾಪನೆ ಹಾಗೂ ₹73.75 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮೋದನೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾವಕಲ್ಲೂರು ಮತ್ತು ಇತರೆ ಪ್ರದೇಶಗಳಿಗೆ ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಒದಗಿಸುವ ₹990 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕು ವ್ಯಾಪ್ತಿಯ 19 ಕೆರೆಗಳನ್ನು ತುಂಬಿಸುವ ₹272 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಅನುಮೋದನೆ.
ಕರ್ನಾಟಕ ಜಿಲ್ಲಾ ನ್ಯಾಯಾಂಗ ಸುಧಾರಣೆಗಳು ಮಸೂದೆ–2025ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಶುಕ್ರವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡನೆಯಾಗಲಿದೆ.





