ಬೆಳಗಾವಿ-ಗೋವಾ-ಮಹಾರಾಷ್ಟ್ರ ಗಡಿಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದಿರುವ ₹400 ಕೋಟಿ ರೂಪಾಯಿ ದರೋಡೆ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದರೋಡೆ 2025ರ ಅಕ್ಟೋಬರ್‌ನಲ್ಲಿ ನಡೆದಿದ್ದರೂ, ಇತ್ತೀಚೆಗೆ ಮಾತ್ರ ವಿಷಯ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ. ಬೆಳಗಾವಿ ಪೊಲೀಸರಿಗೆ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.
ಪ್ರಾರಂಭದಲ್ಲಿ, ಎರಡು ಟ್ರಕ್‌ಗಳಲ್ಲಿ ಸಾಗಿಸಲಾಗುತ್ತಿದ್ದ ಹಣವು ಮಹಾರಾಷ್ಟ್ರದ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಹೊರಬಂದಿರುವ ವರದಿಗಳ ಪ್ರಕಾರ, ಈ ಹಣವು ಗುಜರಾತ್‌ನ ಒಬ್ಬ ರಾಜಕಾರಣಿಗೆ ಸೇರಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆ ರಾಜಕಾರಣಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನೂ, ದರೋಡೆಯಾದ ಹಣವನ್ನು ಮಹಾರಾಷ್ಟ್ರ ಪಾಲಿಕೆ ಚುನಾವಣೆ ಖರ್ಚಿಗೆ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಪ್ರಕರಣಕ್ಕೆ ರಾಜಕೀಯ ನಂಟು ಇರುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.
ಈ ನಡುವೆ, ದರೋಡೆ ಹಣಕ್ಕೆ ಸಂಬಂಧಿಸಿ ಕಿಶೋರ್ ಶೇಟ್ ಮತ್ತು ಜಯೇಶ್ ನಡುವಿನ ಆಡಿಯೊ ಸಂಭಾಷಣೆ ವೈರಲ್ ಆಗಿದೆ. ಆ ಆಡಿಯೊದಲ್ಲಿ ಗುಜರಾತ್ ರಾಜಕಾರಣಿಯ ಬಗ್ಗೆ ಮಾತುಕತೆ ನಡೆದಿರುವುದು ತನಿಖೆಗೆ ಮಹತ್ವದ ಸುಳಿವು ಎಂದು ಹೇಳಲಾಗುತ್ತಿದೆ.
ರಾಜಕೀಯ ಪ್ರತಿಕ್ರಿಯೆಗಳು
ಚೋರ್ಲಾ ಘಾಟ್ ದರೋಡೆ ಪ್ರಕರಣ ಕುರಿತು ಕರ್ನಾಟಕ ರಾಜಕೀಯದಲ್ಲೂ ಆರೋಪ-ಪ್ರತ್ಯಾರೋಪಗಳು ಶುರುವಾಗಿದೆ. ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ಸಿನವರೇ ಹಣ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕರು, “ನೋಟುಗಳ ಮೇಲೆ ಪಕ್ಷದ ಹೆಸರು ಬರೆದಿದೆಯೇ?” ಎಂದು ಪ್ರಶ್ನಿಸಿ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಗೃಹ ಸಚಿವರ ಹೇಳಿಕೆ
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್, ಮಹಾರಾಷ್ಟ್ರ ಪೊಲೀಸರು SIT ರಚಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಕೆಲವು ಗೊಂದಲಗಳಿವೆ. ಅಂತಿಮ ವರದಿ ಬಂದ ನಂತರವೇ ಸತ್ಯ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ. ತನಿಖೆಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.




