ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ದೂರುದಾರ ಸಂದೀಪ್ ಪಾಟೀಲ್ ಅವರು ಬೆಳಗಾವಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರದ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ತನಿಖೆ ಪಾರದರ್ಶಕವಾಗಿಲ್ಲ ಎಂದು ಪತ್ರದಲ್ಲಿ ಆರೋಪಿಸಿರುವ ಸಂದೀಪ್ ಪಾಟೀಲ್, ಘಟನೆಗೆ ಸಂಬಂಧಿಸಿದ ಕೆಲ ಮಹತ್ವದ ಆಡಿಯೋ ದಾಖಲೆಗಳು ತಮ್ಮ ಬಳಿ ಇರುವುದಾಗಿ ಉಲ್ಲೇಖಿಸಿದ್ದಾರೆ. ಆ ದಾಖಲೆಗಳ ಆಧಾರದಲ್ಲಿ ಬೆಳಗಾವಿ ಪೊಲೀಸರು ಎಫ್‌ಐಆರ್ ದಾಖಲಿಸಿ, ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಚೋರ್ಲಾ ಘಾಟ್ ದರೋಡೆ ಪ್ರಕರಣದ ತನಿಖೆ ಮಹಾರಾಷ್ಟ್ರ ಎಸ್‌ಐಟಿ ಕೈಯಲ್ಲಿದ್ದರೂ, ತನಿಖೆಯ ದಿಕ್ಕು ಮತ್ತು ಪ್ರಗತಿ ಕುರಿತು ಹಲವು ಅನುಮಾನಗಳು ಮೂಡಿವೆ ಎಂದು ಸಂದೀಪ್ ಪಾಟೀಲ್ ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ. ಪ್ರಕರಣದ ಸತ್ಯಾಂಶಗಳು ಹೊರಬರಬೇಕಾದರೆ ಕರ್ನಾಟಕ ಪೊಲೀಸರು ಹಸ್ತಕ್ಷೇಪ ಮಾಡಿ ಸಮಗ್ರ ತನಿಖೆ ನಡೆಸುವುದು ಅಗತ್ಯವೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ | ಕತ್ತೆ ಕಿರುಬ ದಾಳಿ : ಎರಡು ಮೇಕೆ ಮರಿಗಳು ಸಾವು
ಈ ಬೆಳವಣಿಗೆಯಿಂದಾಗಿ ಈಗಾಗಲೇ ಸಂಚಲನ ಮೂಡಿಸಿರುವ 400 ಕೋಟಿ ರೂ. ದರೋಡೆ ಪ್ರಕರಣ ಮತ್ತಷ್ಟು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಬೆಳಗಾವಿ ಪೊಲೀಸರು ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.





