ಬೆಳಗಾವಿ ಜಿಲ್ಲೆಯ ಎಲ್ಲಾ 15 ತಾಲೂಕು ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ದೊಡ್ಡ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಹೆಚ್ಚಾಗಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪೊಲೀಸ್ ಮತ್ತು ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ, ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಟ್ರ್ಯಾಕ್ಟರ್‌ಗಳಿಂದ ಹಚ್ಚಲಾಗುತ್ತಿರುವ ಕರ್ಕಶ ಹಾಗೂ ಅಸಭ್ಯ ಹಾಡುಗಳು ಶಾಲಾ ಮಕ್ಕಳ ಅಧ್ಯಯನಕ್ಕೆ ಅಡಚಣೆ ಉಂಟುಮಾಡುತ್ತಿದ್ದು, ಚಿಕ್ಕಮಕ್ಕಳು, ವೃದ್ಧರು, ಮಹಿಳೆಯರು ಮತ್ತು ಗರ್ಭಿಣಿಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಲಾಗಿದೆ. ಶಬ್ದ ಮಾಲಿನ್ಯದಿಂದ ಅಪಘಾತಗಳ ಪ್ರಮಾಣವೂ ಹೆಚ್ಚುತ್ತಿದೆ ಎಂದು ಕೂಡಾ ಅವರು ತಿಳಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ ಆರೋಪ
17.11.2025 ಹಾಗೂ 09.10.2025 ರಂದು ಜಂಟಿ ಸಾರಿಗೆ ಆಯುಕ್ತರು ಮತ್ತು ರಾಮದುರ್ಗ ಎ.ಆರ್.ಟಿ.ಓ ಕಚೇರಿಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳದಿರುವುದು ಗಂಭೀರ ಕರ್ತವ್ಯಲೋಪವೆಸಗಿದಂತಾಗಿದೆ ಎಂದು ಶ್ರೀನಿವಾಸಗೌಡ ಪಾಟೀಲ ಅವರು ಆರೋಪಿಸಿದ್ದಾರೆ.
ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಕಾರಣಕ್ಕೆ ರಾಮದುರ್ಗ ಎ.ಆರ್.ಟಿ.ಓ ಬಸವರಾಜ ಬಾಗಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಠಿಣ ಕ್ರಮಕ್ಕೆ ಒತ್ತಾಯ
ಶ್ರೀನಿವಾಸಗೌಡ ಪಾಟೀಲ ಅವರು ತಮ್ಮ ಮನವಿಯಲ್ಲಿ ಕೆಳಗಿನ ಕ್ರಮಗಳನ್ನು ಜಾರಿಗೆ ತರಬೇಕೆಂದು ತಿಳಿಸಿದ್ದಾರೆ:
ಟ್ರ್ಯಾಕ್ಟರ್‌ಗಳಲ್ಲಿರುವ ಅಕ್ರಮ ಸೌಂಡ್ ಬಾಕ್ಸ್‌ಗಳ ತೆರವು
ದುಷ್ಕರ್ಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಕೆ
ಗರಿಷ್ಠ ದಂಡ ವಿಧಿಸುವುದು
ಟ್ರ್ಯಾಕ್ಟರ್‌ಗಳ ನೋಂದಣಿ ರದ್ದುಪಡಿಸುವ ಕ್ರಮ
ಆರ್.ಟಿ.ಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿರ್ಮೂಲನೆ
23 ಡಿಸೆಂಬರ್‌ನಿಂದ ಉಪವಾಸ ಧರಣಿ
“ಅಕ್ರಮಗಳನ್ನು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ, 23 ಡಿಸೆಂಬರ್ 2025ರಿಂದ ರಾಮದುರ್ಗ ಎ.ಆರ್.ಟಿ.ಓ ಕಚೇರಿ ಮುಂದೆ ಶಾಲಾ ಮಕ್ಕಳು, ಪಾಲಕರು ಹಾಗೂ ಸಂಘಟನೆಗಳೊಂದಿಗೆ ಅನಿರ್ದಿಷ್ಟ ಕಾಲದ ಅಹೋರಾತ್ರಿ ಉಪವಾಸ ಧರಣಿ ನಡೆಸಲಾಗುವುದು” ಎಂದು ಶ್ರೀನಿವಾಸಗೌಡ ಪಾಟೀಲ ಅವರು ಎಚ್ಚರಿಸಿದ್ದಾರೆ.





