ವಿಶೇಷ ಮಹಿಳಾ ಗ್ರಾಮ ಸಭೆಗಳನ್ನು ಕರೆದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ-2025 ಯೋಜನೆಯನ್ನು ರದ್ದುಪಡಿಸಿ ಮನರೇಗಾ ಯೋಜನೆಯನ್ನು ಮುಂದುವರೆಸುವಂತೆ ಠರಾವು ಪಾಸ್ ಮಾಡಬೇಕು ಎಂದು ಗ್ರಾಕೂಸ್ ಸಂಘಟನೆಯಿಂದ ಹುಕ್ಕೇರಿ ತಾಲೂಕಿನ ಮಣಗುತ್ತಿ ಮತ್ತು ಕಡೋಳಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಲಾಯಿತು.
ದಿನಾಂಕ 27-01-2025ರಿಂದ ಪ್ರಾರಂಭವಾಗುವ ಗ್ರಾಮ ಸಭೆಗಳಲ್ಲಿ ವಿಶೇಷ ಮಹಿಳಾ ಸಭೆಗಳನ್ನು ನಡೆಸಿ, ವಿಬಿಜಿ ರಾಮ್ ಜಿ-2025 ರ ಪರಿಣಾಮಗಳ ಕುರಿತು ಚರ್ಚಿಸಿ ಮನರೇಗಾ ಯೋಜನೆ ಮುಂದುವರಿಸುವ ನಿರ್ಣಯ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿತು.

ಹಣಕಾಸಿನ ಜವಾಬ್ದಾರಿಯಲ್ಲಿ ಕೇಂದ್ರ ಸರ್ಕಾರ 60% ಹಾಗೂ ರಾಜ್ಯ ಸರ್ಕಾರಗಳು 40% ಪಾಲು ಹೊಂದಬೇಕಿರುವುದು ರಾಜ್ಯಗಳಿಗೆ ಭಾರವಾಗಿದೆ. ರಾಜ್ಯಗಳಿಗೆ ತೆರಿಗೆಯ ಬಹುಪಾಲು ಕೇಂದ್ರ ಸರ್ಕಾರಕ್ಕೆ ಹೋಗುತ್ತಿರುವುದರಿಂದ ಈಗ ವ್ಯವಸ್ಥೆಯಿಂದ ದುಡಿಯುವ ಕೈಗಳಿಗೆ ಕೆಲಸ ಸಿಗ ಪರಿಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯ ಹಾಗೂ ಕೂಲಿ ಕಾರ್ಮಿಕರ ಒಪ್ಪಿಗೆ ಪಡೆಯದೆ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನರೇಗಾ ಕಾರ್ಮಿಕರಾದ ಪುಷ್ಪಾ ಮಜಗಾಂವಿ ಮಾತನಾಡಿ, ಮನರೇಗಾ ಯೋಜನೆಯಿಂದಲೇ ನಮ್ಮ ಜೀವನ ಸಾಗುತ್ತಿತ್ತು. ಅಗತ್ಯವಿದ್ದಾಗ ಕೆಲಸ ಸಿಗುತ್ತಿತ್ತು. ವಿಬಿಜಿ ರಾಮ್ ಜಿ ಯೋಜನೆ ಇದಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಬಿಲ್ ರದ್ದುಪಡಿಸಬೇಕು ಎಂದು ಹೇಳಿದರು.
ಅನಿತಾ ಬೆಳಗಾಂವಕರ ಮಾತನಾಡಿ, ಮನರೇಗಾ ಯೋಜನೆಯಲ್ಲಿ ಕೇಳಿದಾಗ ಕೆಲಸ ಸಿಗುತ್ತಿತ್ತು. ಆದರೆ ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡಿದಾಗ ಮಾತ್ರ ಕೆಲಸ ಮಾಡಬೇಕಾಗುತ್ತದೆ. ಇದು ಕಾರ್ಮಿಕರಿಗೆ ಅನ್ಯಾಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಗಿರಿ, ಕಡೋಳಿ, ಮಣಗುತ್ತಿ, ಶಾಪರವಾಡಿ, ಗುಂಜಾನಟ್ಟಿ ಗ್ರಾಮಗಳ ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಕೂಸ್ ಸಂಘಟನೆಯ ವಿಶ್ವೇಶ್ವರಯ್ಯ ಹಿರೇಮಠ, ಮಹದೇವಿ ಓಜಿ ಉಪಸ್ಥಿತರಿದ್ದರು.




