ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವ ಎಂದರೆ ಎಲ್ಲರ ಗಮನ ಬೆಳಗಾವಿಯತ್ತ ತಿರುಗುತ್ತದೆ. ರಾಜ್ಯದ ಅತಿ ಹೆಚ್ಚು ಸಡಗರ ಮತ್ತು ವಿಜ್ರಂಭಣೆಯೊಂದಿಗೆ ರಾಜ್ಯೋತ್ಸವವನ್ನು ಆಚರಿಸುವ ಈ ಗಡಿಯ ನಗರಕ್ಕೆ ಇದೇ ಮೊದಲ ಬಾರಿಗೆ ಸರ್ಕಾರದಿಂದ ₹50 ಲಕ್ಷಗಳ ಅನುದಾನ ಬಿಡುಗಡೆಯಾಗಿದೆ.
ಕಾನೂನು, ಪ್ರವಾಸೋದ್ಯಮ ಹಾಗೂ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ವಿಶೇಷ ಪ್ರಯತ್ನದ ಫಲವಾಗಿ ಪ್ರವಾಸೋದ್ಯಮ ಇಲಾಖೆಯು ಈ ಅನುದಾನವನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಬಿಡುಗಡೆ ಮಾಡಿದೆ.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹಾಗೂ ಇತರ ಕನ್ನಡ ಸಂಘಟನೆಗಳ ಸುಮಾರು 25ಕ್ಕೂ ಹೆಚ್ಚು ಪ್ರಮುಖರು ಇತ್ತೀಚೆಗೆ ಬೆಂಗಳೂರಿನಲ್ಲಿ ಸಚಿವ ಎಚ್.ಕೆ. ಪಾಟೀಲರನ್ನು ಭೇಟಿ ಮಾಡಿ ರಾಜ್ಯೋತ್ಸವಕ್ಕಾಗಿ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಸಚಿವರು ₹50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿರುವುದು ಬೆಳಗಾವಿ ಜನರಲ್ಲಿ ಹರ್ಷದ ವಾತಾವರಣ ನಿರ್ಮಿಸಿದೆ.





