ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು 22 ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿದೆ. ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿರುವ 865 ನಗರ, ಪಟ್ಟಣ ಹಾಗೂ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಬೇಡಿಕೆಯುಳ್ಳ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬೇಕೋ ಅಥವಾ ಮೂಲದಲ್ಲೇ ತಿರಸ್ಕರಿಸಬೇಕೋ ಎಂಬ ಮಹತ್ವದ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.
ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ನಿಶಾಂತ ಪಾಟೀಲ ವಕಾಲತ್ತು ವಹಿಸಲಿದ್ದಾರೆ. ಗಡಿ ರೇಖೆ ಗುರುತಿಸುವ ಪರಮಾಧಿಕಾರ ಸಂಸತ್ತಿಗೇ ಸೇರಿದ್ದು, ಇದು ನ್ಯಾಯಾಂಗ ವ್ಯಾಪ್ತಿಗೆ ಒಳಪಡುವ ವಿಷಯವೇ ಅಲ್ಲ ಎಂಬ ಬಲವಾದ ವಾದವನ್ನು ರಾಜ್ಯ ಸರ್ಕಾರ ಮಂಡಿಸಲು ಸಜ್ಜಾಗಿದೆ. ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮೂಲದಲ್ಲೇ ತಿರಸ್ಕರಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಮಾಡುವ ಸಾಧ್ಯತೆ ಇದೆ.
ಗಡಿ ವಿವಾದ ಕುರಿತು ಸೋಮವಾರ ನಂದಗಡದಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಗಡಿ ರೇಖೆ ಗುರುತಿಸುವ ಅಧಿಕಾರ ಸಂಪೂರ್ಣವಾಗಿ ಸಂಸತ್ತಿಗೇ ಸೇರಿದೆ. ಇದು ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುವ ವಿಷಯವೇ ಅಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ಈ ಸಂಬಂಧ ಕೇಸ್ ಹಾಕುವ ಹಕ್ಕೇ ಇಲ್ಲ. ಗಡಿ ವಿವಾದ ನ್ಯಾಯಾಂಗ ವ್ಯಾಪ್ತಿಗೆ ಬಾರದು ಎಂಬುದು ನಮ್ಮ ದೃಢವಾದ ಕಾನೂನು ವಾದ. ಕರ್ನಾಟಕದ ಕಾನೂನು ತಜ್ಞರ ತಂಡ ಬಲಾಡ್ಯವಾಗಿದೆ” ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಗಡಿ ಭಾಗಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳು ಸೇರಿದಂತೆ ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.




