ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಚೆಕ್ ನೀಡಲು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿ ಎಂಬುವವರ 14 ಗುಂಟೆ ಜಮೀನನ್ನು ಮುಗಳಖೋಡ ಹಾಗೂ ಹಾರೂಗೇರಿ ಪಟ್ಟಣಗಳಿಗೆ ಅಮೃತ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿದ್ದರು.
ಸ್ವಾಧೀನಪಡಿಸಿಕೊಂಡ ಜಮೀನಿಗೆ ಸರ್ಕಾರದಿಂದ ಮಂಜೂರಾದ ₹18 ಲಕ್ಷ ರೂ. ಪರಿಹಾರ ಮೊತ್ತದ ಚೆಕ್ ನೀಡಲು, ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರ ಅವರು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ಲೋಕಾಯುಕ್ತ ಅಧಿಕಾರಿ ನಿರಂಜನ ಪಾಟೀಲ್ ಅವರು ಅಕ್ಟೋಬರ್ 17 ರಂದು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಲಂಚದ ಬೇಡಿಕೆ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





