ವಸತಿ ಸಚಿವರಿಗೆ ಘೇರಾವ್ – ಐದು ನಿರ್ಣಯಗಳಿಗೆ ಒಪ್ಪಿಗೆ
ರಾಜ್ಯ ಸರ್ಕಾರ ಸ್ಲಂ ನಿವಾಸಿಗಳ ಸಮಸ್ಯೆಗಳತ್ತ ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ವತಿಯಿಂದ ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಚಳಿಗಾಲದ ವಿಧಾನಮಂಡಲ ಅಧಿವೇಶನದ ಭಾಗವಾಗಿ ಸುವರ್ಣಸೌಧದ ಎದುರು ವಸತಿ ಸಚಿವ ಜಮೀರ್ ಅಹಮದ್ ಅವರಿಗೆ ಘೇರಾವ್ ಹಾಕಿ ಮನವಿ ಸಲ್ಲಿಸಲಾಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ, ನಗರ ಪ್ರದೇಶಗಳ ಸ್ಲಂಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ–ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಅಲೆಮಾರಿ ಸಮುದಾಯಗಳ ಜನರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು. 2023ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ. ಸ್ಲಂ ನಿವಾಸಿಗಳಿಗೆ ಭೂಮಿ ಹಾಗೂ ವಸತಿ ಖಾತ್ರಿ ನೀಡದೆ ಸಾಮಾಜಿಕ ನ್ಯಾಯದಿಂದ ವಂಚಿಸಲಾಗುತ್ತಿದೆ ಎಂದರು.
2026–27ನೇ ಸಾಲಿನ ಬಜೆಟ್‌ನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಬೇಕು, ಒನ್ ಟೈಮ್ ಗ್ರಾಂಟ್ ನೀಡಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಖಾಸಗಿ ಕೊಳಚೆ ಪ್ರದೇಶಗಳ ಸ್ವಾಧೀನಕ್ಕೆ ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದರು.
ನಂತರ ಕಿತ್ತೂರು ವಿಭಾಗದ ಸಂಚಾಲಕರಾದ ಇಮ್ತಿಯಾಜ್ ಆರ್. ಮಾನ್ವಿ ಅವರು ಸಭೆಯ ನಿರ್ಣಯಗಳನ್ನು ಮಂಡಿಸಿದರು. 2023ರ ಪ್ರಣಾಳಿಕೆಯಂತೆ ಉಚಿತ ಭೂಮಿ ಮತ್ತು ವಸತಿ ಖಾತ್ರಿ, ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಸಂಬಂಧಿಸಿದ ಸುತ್ತೋಲೆ ವಾಪಸ್, ಬಜೆಟ್‌ನಲ್ಲಿ ಸಮರ್ಪಕ ಅನುದಾನ, ನಗರ ಪ್ರದೇಶಗಳಲ್ಲಿ ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿ ಹಾಗೂ ವಸತಿ ಹಕ್ಕು ಜಾರಿಗೆ ತರುವಂತೆ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ವಿವಿಧ ಜಿಲ್ಲೆಗಳ ಸ್ಲಂ ಜನಾಂದೋಲನ ಸಂಚಾಲಕರು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.





