ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗುಡ್ಡದ ಮೇಲೆ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ನಿಯಮಾನುಸಾರ ನಡೆಯುತ್ತಿದ್ದು, ರೈತರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ಸ್ಪಷ್ಟಪಡಿಸಿದ್ದಾರೆ.
ಬೇಕಾಬಿಟ್ಟಿಯಾಗಿ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಮುಂಚೆಯೇ ಅಸ್ತಿತ್ವದಲ್ಲಿದ್ದ ಸರ್ಕಾರದ ರಸ್ತೆಯನ್ನೇ ಮರುನಿರ್ಮಿಸಲಾಗುತ್ತಿದೆ. ರೈತರೊಂದಿಗೆ ಸಮಾಲೋಚನೆ ನಡೆಸಿಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದು ಏಕಪಕ್ಷೀಯ ನಿರ್ಧಾರವಲ್ಲ ಎಂದು ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ನೂತನ ಮುಖ್ಯ ಆವರಣಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅನುದಾನ ಒದಗಿಸಿದ್ದು, ಉನ್ನತ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಗ್ರಾಮೀಣ ಶಾಸಕರೂ ವಿಶೇಷ ↓ ಪ್ರಯತ್ನ ನಡೆಸಿದ್ದಾರೆ. ಲೋ ಕಾಮಗಾರಿ ನಡೆಯುತ್ತಿದ್ದು, ಗಯೋಗಿ ಇಲಾಖೆ ಮೂಲಕ ಯ ಇಲಾಖೆಯ ಗ್ರಾಮ ನಕಾಶೆಯ ದಾಖಲೆಗಳ ಪ್ರಕಾರ ಹಾಗೂ ರೈತರ
ಕೋರಿಕೆಯಂತೆ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಪ್ರಸ್ತುತ ಲೋಕೋಪಯೋಗಿ ಇಲಾಖೆಯಿಂದ ನೇಮಿಸಲಾದ ಗುತ್ತಿಗೆದಾರರು ರಸ್ತೆಯನ್ನು ಸಿ.ಸಿ. ದರ್ಜೆಗೆ ಉನ್ನತೀಕರಿಸಲು ತಯಾರಿ ನಡೆಸಿದ್ದಾರೆ. ಸರ್ಕಾರಿ ರಸ್ತೆಯ ಅಳತೆ ಹಾಗೂ ಗಡಿಗಳನ್ನು ಗುರುತಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರೈತರ ಒತ್ತಾಯದಂತೆ ಕಂದಾಯ ಇಲಾಖೆಯ ದಾಖಲೆಗಳನ್ವಯ ಅಳತೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕ್ಯಾಂಪಸ್‌ನಲ್ಲಿ ನೀರಿನ ಮೂಲ ಇಲ್ಲದ ಹಿನ್ನೆಲೆಯಲ್ಲಿ, ಸರ್ಕಾರದ ರಸ್ತೆಯ ಇಕ್ಕೆಲಗಳಲ್ಲಿ ನೀರಿನ ಲಭ್ಯತೆ ಬಗ್ಗೆ ಮಾಹಿತಿ ದೊರೆತ ಕಾರಣ ಬೋರ್‌ವೆಲ್ ಕೊರೆಯಲಾಗಿದೆ. ಅಗತ್ಯ ನೀರು ಲಭ್ಯವಾಗದ ಹಿನ್ನೆಲೆಯಲ್ಲಿ, ನೀರಿನ ಮೂಲ ಹೊಂದಿರುವ ರೈತರಿಂದ ನೀರನ್ನು ಪಡೆದು ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿದೆ. ಕಾಮಗಾರಿ ವೇಳೆ ರೈತರ ಪೈಪ್‌ಲೈನ್‌ಗಳಿಗೆ ಹಾನಿಯಾಗದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಯಾವುದೇ ತೊಂದರೆಯಾಗಿದ್ದರೆ ವಿಶ್ವವಿದ್ಯಾಲಯವೇ ಸರಿಪಡಿಸಲಿದೆ ಎಂದು ತಿಳಿಸಿದ್ದಾರೆ.
ವಾಹನಗಳ ಓಡಾಟದಿಂದ ಬೆಳೆಗಳಿಗೆ ಧೂಳು ಬೀಳುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ವಾಹನಗಳು ಗಂಟೆಗೆ 20 ಕಿ.ಮೀ ವೇಗ ಮೀರದಂತೆ ಸೂಚನೆ ನೀಡಲಾಗಿದೆ. ರಸ್ತೆಯ ಮೇಲೆ ನಿಯಮಿತವಾಗಿ ನೀರು ಸಿಂಪಡಿಸಲು ಹಾಗೂ ಮೇಲ್ವಿಚಾರಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಗತ್ಯ ಸೂಚನಾ ಫಲಕಗಳನ್ನೂ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗಳಿದ್ದರೆ ರೈತರು ಎಸ್ಟೇಟ್ ಕಚೇರಿ ಅಧೀಕ್ಷಕ ಅಧಿಕಾರಿ (8147981201) ಅಥವಾ ಸಂಬಂಧಿತ ಅಧಿಕಾರಿಯನ್ನು (9945726407) ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಜ.19ರಂದು ನೂತನ ಕ್ಯಾಂಪಸ್‌ನಲ್ಲಿ ಕರೆದಿರುವ ಸಭೆಯನ್ನು ತಮ್ಮ ಹೊಲದಲ್ಲೇ ನಡೆಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಹೊಲದಲ್ಲೇ ಸಭೆ ನಡೆಸಿದರೆ ಮಾತ್ರ ತಮ್ಮ ಸಮಸ್ಯೆಗಳ ನೈಜತೆ ಅಧಿಕಾರಿಗಳಿಗೆ ಅರ್ಥವಾಗುತ್ತದೆ. ಇಲ್ಲದಿದ್ದರೆ ಸಭೆ ಬಹಿಷ್ಕರಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.




