ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಲಾಗಿದೆ. ಡಾ:ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ನಾಲ್ಕು ಕ್ರೈಸ್ (KREIS) ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಗಿದೆ.
ಈ ವಸತಿ ಶಾಲೆಗಳು ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ. ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಡಾ| ಬಿ.ಆರ್. ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿರುವುದು ಐತಿಹಾಸಿಕವಾಗಿ ದಾಖಲಾಗಿದೆ. ವಿಶೇಷವಾಗಿ 1939ರ ಡಿಸೆಂಬರ್ 26ರಂದು ಅವರು ಬೆಳಗಾವಿಗೆ ಭೇಟಿ ನೀಡಿ ವಕೀಲರ ಸಂಘವನ್ನು ಉದ್ದೇಶಿಸಿ ಮಾತನಾಡಿದ್ದರು.
ಇದರ ಜೊತೆಗೆ ಅವರು 1925ರ ಏಪ್ರಿಲ್‌ನಲ್ಲಿ ನಿಪ್ಪಾಣಿ ಹಾಗೂ 1937ರಲ್ಲಿ ಚಿಕ್ಕೋಡಿಗೂ ಭೇಟಿ ನೀಡಿದ್ದರು. 1939ರ ಭೇಟಿಯ ವೇಳೆ ಬೆಳಗಾವಿಯ ಕಂಗ್ರಾಲ್ ಗಲ್ಲಿಯಲ್ಲಿ ವಾಸ್ತವಾಡ್ಕರ್ ಎಂಬುವರ ಮನೆಯಲ್ಲಿ ಅವರು ವಾಸ್ತವ್ಯ ಹೂಡಿದ್ದರು.
ಅಂಬೇಡ್ಕರ್ ಅವರ ಸ್ಮರಣಾರ್ಥ ಈ ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸುವ ನಿರ್ಧಾರಕ್ಕೆ ಶಿಕ್ಷಣ ವಲಯದಲ್ಲಿ ಸ್ವಾಗತ ವ್ಯಕ್ತವಾಗಿದೆ.




