ಉತ್ತರ ಕರ್ನಾಟಕಕ್ಕೆ ದೀರ್ಘಕಾಲದಿಂದ ನಡೆಯುತ್ತಿರುವ ಅನ್ಯಾಯ ಮತ್ತು ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ವಿರೋಧವಾಗಿ, ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಗಟ್ಟಿಗೊಳ್ಳಲಿದೆ. ಒಟ್ಟು 26 ಮಂದಿ ಶಾಸಕರು ಅಧಿವೇಶನದಲ್ಲಿ ಅಧಿಕೃತವಾಗಿ ಧ್ವನಿ ಎತ್ತಲು ಸಜ್ಜಾಗಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಶನಿವಾರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ಕುರಿತು ಗಂಭೀರವಾಗಿ ಗಮನ ಸೆಳೆದಿದ್ದು, ಈ ಪತ್ರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಎಂದು ಹೇಳಿದರು.
1.48 ಕೋಟಿ ಜನರಿಂದ ಬೆಂಬಲ
ಗೋಲಶೆಟ್ಟಿ ಅವರ ಪ್ರಕಾರ, ಈಗಾಗಲೇ 1,48,91,346 ನಾಗರಿಕರು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ 26 ಶಾಸಕರ ಸಭೆ ಕರೆಯಲಾಗಿದ್ದು, ಡಿಸೆಂಬರ್ 11 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ವಿಚಾರವನ್ನು ಅಧಿಕೃತವಾಗಿ ಮಂಡಿಸಲು ನಿರ್ಧರಿಸಲಾಗಿದೆ.
ಯಾರೆಲ್ಲ ಬೆಂಬಲಿಸಿದ್ದಾರೆ?
ರಾಜು ಕಾಗೆ ನೇತೃತ್ವದ ಈ ಹೋರಾಟಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ ಸೇರಿ ಒಟ್ಟು 15 ಜಿಲ್ಲೆಗಳ ಶಾಸಕರಿಂದ ಪಕ್ಷಾತೀತ ಬೆಂಬಲ ದೊರಕಿದೆ.
ಬೆಂಬಲ ವ್ಯಕ್ತಪಡಿಸಿರುವ ಪ್ರಮುಖ ಶಾಸಕರು:
ಸಿದ್ದು ಸವದಿ
ವಿಜಯಾನಂದ ಕಾಶಪ್ಪನವರ
ಬಸನಗೌಡ ಪಾಟೀಲ್ ಯತ್ನಾಳ್
ಶರಣು ಸಲಗರ
ಶರಣಪ್ರಕಾಶ ಪಾಟೀಲ್
ವಿನಯ ಕುಲಕರ್ಣಿ
ಅರವಿಂದ ಬೆಲ್ಲದ
ಜನಾರ್ದನ ರೆಡ್ಡಿ
ನಾರಾ ಭರತ ರೆಡ್ಡಿ
ನಿಖಿಲ್ ಕತ್ತಿ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಬಲವಾಗಿ ಮೊಳಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ಪ್ರಾರಂಭವಾಗಿವೆ.





