ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಒಂದೇ ಒಂದು ಯೋಜನೆಯನ್ನೂ ಘೋಷಿಸಿಲ್ಲ ಎಂದು ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು-ಹೈದರಾಬಾದ್ ಹಾಗೂ ಬೆಂಗಳೂರು-ಚೆನ್ನೈ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿಗೆ ಘೋಷಣೆ ಮಾಡಿರುವುದು ಸ್ವಾಗತಾರ್ಹವಾದರೂ, ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದರು. ಈ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸದಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ಪ್ರತಿಬಿಂಬವಾಗಿದೆ ಎಂದು ಆರೋಪಿಸಿದರು.
ಇನ್ನೂ, ಈ ಬಜೆಟ್‌ನಲ್ಲಿ ಯುವಕರ ಹಿತಾಸಕ್ತಿಗೆ ಅಗತ್ಯವಾದ ಅಂಶಗಳಿಲ್ಲ. ಉದ್ಯೋಗ ಸೃಷ್ಟಿ ಕುರಿತು ಯಾವುದೇ ಸ್ಪಷ್ಟ ಯೋಜನೆಗಳು ಅಥವಾ ನೀತಿಗಳನ್ನು ಪ್ರಕಟಿಸಿಲ್ಲ. ಯುವಜನತೆಗೆ ಭರವಸೆ ನೀಡುವಂತಹ ಅಂಶಗಳಿಲ್ಲದ ಬಜೆಟ್ ಇದಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಅಸಮಾಧಾನ ವ್ಯಕ್ತಪಡಿಸಿದರು.




