ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗುತ್ತಿರುವ ಹೊತ್ತಿನಲ್ಲಿ, ಲೋಕಾಪೂರ-ರಾಮದುರ್ಗ-ಸವದತ್ತಿ-ಧಾರವಾಡ ರೈಲು ಮಾರ್ಗಕ್ಕೆ ಅನುಧಾನ ಸಿಗಬಹುದೇ ಎಂಬ ನಿರೀಕ್ಷೆ ಉತ್ತರ ಕರ್ನಾಟಕದ ಈ ಭಾಗದ ಜನರಲ್ಲಿ ಹೆಚ್ಚಾಗಿದೆ. ಆದರೆ ಈ ನಿರೀಕ್ಷೆ ಕೇವಲ ಬಜೆಟ್ ಘೋಷಣೆಗೆ ಸೀಮಿತವೋ, ಅಥವಾ ರಾಜಕೀಯ ಇಚ್ಛಾಶಕ್ತಿಯ ಪರೀಕ್ಷೆಯೋ ಎಂಬ ಪ್ರಶ್ನೆ ಗಂಭೀರವಾಗಿದೆ.
ಸುಮಾರು ದಶಕಗಳಿಂದ ಕೇಳಿಬರುತ್ತಿರುವ ಈ ರೈಲು ಮಾರ್ಗದ ಬೇಡಿಕೆ, ಪ್ರತಿ ಬಜೆಟ್ ಸಮಯದಲ್ಲೂ “ಪರಿಗಣನೆಯ ಹಂತದಲ್ಲಿದೆ” ಎಂಬ ಉತ್ತರದಲ್ಲೇ ಮುಗಿಯುತ್ತಿದೆ. 2019ರಲ್ಲಿ ನಡೆದ ಪ್ರಾಥಮಿಕ ಸಮೀಕ್ಷೆಯಲ್ಲಿ “ಆರ್ಥಿಕವಾಗಿ ಲಾಭದಾಯಕವಲ್ಲ” ಎಂಬ ಕಾರಣ ನೀಡಿ ಯೋಜನೆಯನ್ನು ಕೈಬಿಟ್ಟಿರುವುದು, ಕೇಂದ್ರ ಸರ್ಕಾರದ ಅಭಿವೃದ್ಧಿ ದೃಷ್ಟಿಕೋನದ ಮೇಲೆಯೇ ಪ್ರಶ್ನೆಗಳನ್ನು ಎತ್ತಿದೆ.
ಧಾರ್ಮಿಕ ಪ್ರವಾಸೋದ್ಯಮ ಮತ್ತು ಆರ್ಥಿಕ ಲಾಭದ ಲೆಕ್ಕ
ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ಶಿರಸಂಗಿಯ ಕಾಳಮ್ಮ ದೇವಿ ದೇವಸ್ಥಾನಕ್ಕೂ ಲಕ್ಷಾಂತರ ಜನ ಆಗಮಿಸುತ್ತಾರೆ. ಇಂತಹ ಭಾರೀ ಧಾರ್ಮಿಕ ಪ್ರವಾಸೋದ್ಯಮ ಇದ್ದರೂ, ಈ ಪ್ರದೇಶದ ರೈಲು ಸಂಪರ್ಕವನ್ನು “ಲಾಭದಾಯಕವಲ್ಲ” ಎಂದು ತಳ್ಳಿಹಾಕಿರುವುದು ರಾಜಕೀಯ ನಿರ್ಲಕ್ಷ್ಯದ ಪ್ರತೀಕವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಒಂದೆಡೆ ಉತ್ತರ ಭಾರತದ ಧಾರ್ಮಿಕ ಕೇಂದ್ರಗಳಿಗೆ ವಿಶೇಷ ರೈಲು ಮಾರ್ಗಗಳು, ವಂದೇ ಭಾರತ ರೈಲುಗಳು ಸಿಗುತ್ತಿದ್ದರೆ, ಇನ್ನೊಂದೆಡೆ ಉತ್ತರ ಕರ್ನಾಟಕದ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಕಡತಗಳಲ್ಲೇ ಸೀಮಿತವಾಗಿರುವುದು ಪ್ರಾದೇಶಿಕ ಅಸಮಾನತೆಯನ್ನು ಬಯಲು ಮಾಡುತ್ತದೆ.
ಜನಪ್ರತಿನಿಧಿಗಳ ಪಾತ್ರ
ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರ ಪ್ರಯತ್ನ ಹಾಗೂ ರೈಲ್ವೆ ಹೋರಾಟಗಾರರ ಒತ್ತಡದಿಂದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರು “ರಾಜ್ಯ ಸರ್ಕಾರ ಭೂಮಿ ನೀಡಿದರೆ ಕೇಂದ್ರಕ್ಕೆ ಪ್ರಸ್ತಾಪಿಸಲಾಗುವುದು” ಎಂದು ಹೇಳಿರುವುದು, ಹೊಣೆಗಾರಿಕೆಯನ್ನು ರಾಜ್ಯದತ್ತ ತಳ್ಳುವ ರಾಜಕೀಯ ತಂತ್ರವೇ ಎಂಬ ಪ್ರಶ್ನೆ ಎದ್ದಿದೆ.
ರಾಜ್ಯ ಸರ್ಕಾರ ಭೂಮಿ ನೀಡಲು ಸಿದ್ಧವೇ?
ಕೇಂದ್ರ ಸರ್ಕಾರ ಯೋಜನೆಗೆ ತತ್ವಾತ್ಮಕ ಅನುಮೋದನೆ ನೀಡಲು ಸಿದ್ಧವೇ?
ಈ ಎರಡರ ನಡುವೆ ನಡೆಯುತ್ತಿರುವ ರಾಜಕೀಯ ಪಿಂಗ್-ಪಾಂಗ್ ಆಟವೇ ಯೋಜನೆ ವಿಳಂಬಕ್ಕೆ ಕಾರಣ ಎನ್ನುವುದು ಹೋರಾಟಗಾರರ ಆರೋಪ.
ಜನವರಿ 2026ರಲ್ಲಿ ಸವದತ್ತಿ ಹಾಗೂ ರಾಮದುರ್ಗದಲ್ಲಿ ನಡೆದ 9 ದಿನಗಳ ಧರಣಿ ಸತ್ಯಾಗ್ರಹ, ಈ ವಿಷಯ ರಾಜಕೀಯ ಅಜಂಡಾದಲ್ಲಿ ಉಳಿಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟಕ್ಕೆ ದಾರಿ ಮಾಡಿಕೊಡಲಿದೆ ಎಂಬ ಎಚ್ಚರಿಕೆಯಾಗಿತ್ತು. ಅನೇಕ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿರುವುದು, ಇದು ಕೇವಲ ಸ್ಥಳೀಯ ಬೇಡಿಕೆ ಅಲ್ಲ, ಪ್ರಾದೇಶಿಕ ಅಭಿವೃದ್ಧಿಯ ಪ್ರಶ್ನೆಯಾಗಿದೆ ಎಂಬುದನ್ನು ಸೂಚಿಸುತ್ತದೆ.
1660 ಕೋಟಿ ವೆಚ್ಚ: ದೊಡ್ಡ ಮೊತ್ತವೇ, ಅಥವಾ ರಾಜಕೀಯ ಕಾರಣವೇ?
ಸುಮಾರು 132 ಕಿ.ಮೀ ಉದ್ದದ ಈ ರೈಲು ಮಾರ್ಗಕ್ಕೆ 1660.70 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಕೋಟಿ ರೂ.ಗಳ ರೈಲು ಯೋಜನೆಗಳು ಇತರೆ ರಾಜ್ಯಗಳಲ್ಲಿ ಘೋಷಣೆಯಾಗಿರುವಾಗ, ಈ ಮೊತ್ತವನ್ನು ಕಾರಣವಾಗಿ ಮುಂದೂಡುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಹೊರತು ಆರ್ಥಿಕ ಅಸಾಧ್ಯತೆಯಲ್ಲ ಎಂದು ವಿಮರ್ಶಕರು ಹೇಳುತ್ತಾರೆ.
ಬಜೆಟ್ ಕೇಂದ್ರ ಸರ್ಕಾರದ ಬದ್ಧತೆ ?
ಇಂದಿನ ಕೇಂದ್ರ ಬಜೆಟ್, ಲೋಕಾಪೂರ-ರಾಮದುರ್ಗ-ಸವದತ್ತಿ ರೈಲು ಮಾರ್ಗದ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಜವಾದ ನಿಲುವನ್ನು ಬಹಿರಂಗಪಡಿಸಲಿದೆ. ಇದು ಕೇವಲ ಅನುಧಾನದ ಪ್ರಶ್ನೆಯಲ್ಲ; ಉತ್ತರ ಕರ್ನಾಟಕದ ಜನತೆಯ ಮೇಲಿನ ರಾಜಕೀಯ ಬದ್ಧತೆಯ ಪರೀಕ್ಷೆಯಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಗೆ ಸ್ಪಂದಿಸುತ್ತಾರೋ, ಅಥವಾ ಮತ್ತೆ “ಪರಿಶೀಲನೆಯಲ್ಲಿದೆ” ಎಂಬ ಗಾಜಕೀಯ ಭಾಷೆಯಲ್ಲೇ ಉತ್ತರ ಸೀಮಿತವಾಗುತ್ತದೆ. ಜನತೆ ಕಾತರದಿಂದ ನೋಡುತ್ತಿದ್ದಾರೆ.





