ಬಳ್ಳಾರಿಯ ಹೊಸಪೇಟೆ ಬಿಡಿಸಿಸಿ ಬ್ಯಾಂಕ್ ಮತ್ತು ಚಿಕ್ಕಜೋಗಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣಕಾಸು ಅವ್ಯವಹಾರದ ಆರೋಪ ಕೇಳಿಬಂದಿದೆ.
2019ರಲ್ಲಿ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕಾಗಿ 15 ಲಕ್ಷ ರೂ. ಸಾಲವನ್ನು ಬಿಡಿಸಿಸಿ ಬ್ಯಾಂಕ್‌ನಿಂದ ಪಡೆದು, 15 ವರ್ಷಗಳಲ್ಲಿ ಕಂತು ಪಾವತಿಸುವಂತೆ ಒಪ್ಪಂದ ಮಾಡಿಕೊಂಡಿದ್ದರೂ, ಹೊಸ ಕಟ್ಟಡ ನಿರ್ಮಿಸದೆ ಹಳೆ ಕಟ್ಟಡವನ್ನೇ ಗಾರೆ ತೆಗೆದು ಸಿಮೆಂಟ್ ಪ್ಲಾಸ್ಟಿಂಗ್ ಮಾಡಿ ಸುಳ್ಳು ಲೆಕ್ಕ ನೀಡಿ ಹಣ ವಂಚನೆ ನಡೆದಿದೆ ಎನ್ನಲಾಗಿದೆ.
ಸಂಘದ ಸದಸ್ಯರು ಖರ್ಚು ವೆಚ್ಚದ ವಿವರ ನೀಡುವಂತೆ ಬ್ಯಾಂಕ್‌ಗೆ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಲೆಕ್ಕ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ. ಕಟ್ಟಡ ಕಾಮಗಾರಿಯನ್ನು ಟೆಂಡರ್ ಕರೆಯದೆ ಸ್ವತಃ ನಡೆಸಿಕೊಂಡು, ನಿಯಮ ಉಲ್ಲಂಘನೆ ಮಾಡಿದ ವಿಚಾರವೂ ಬಯಲಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಸಂಘದ ಸದಸ್ಯರು ಸಂಬಂಧಪಟ್ಟ ಇಲಾಖೆಗೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಲು ಸಿದ್ಧರಾಗಿದ್ದಾರೆ. ಇತ್ತ, ಹೊಸಪೇಟೆ ಕೇಂದ್ರ ಕಚೇರಿಯಲ್ಲಿಯೂ ಇತ್ತೀಚೆಗೆ ನೂರಾರು ಕೋಟಿ ಸೈಬರ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬಳ್ಳಾರಿ | ಜೂಜು ಅಡ್ಡೆಗಳ ಮೇಲೆ ಪೊಲೀಸ್ ದಾಳಿ; 1136 ಮಂದಿ ವಿರುದ್ದ ಪ್ರಕರಣ ದಾಖಲು
ಅಖಂಡ ಬಳ್ಳಾರಿ ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ತಿಪ್ಪೇಸ್ವಾಮಿ ವಿರುದ್ಧ ಕುರಿಹಟ್ಟಿ ಓಬಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ರಾಜೀನಾಮೆ ಆಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.
ಕುರಿಹಟ್ಟಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಕನಡಕು ಸಣ್ಣ ಮಾರಣ್ಣ, ರೈತ ಮುಖಂಡ ಮಡಕಲಕಟ್ಟೆ ಕೃಷ್ಣಪ್ಪ, ಗುರುಲಿಂಗಣ್ಣ, ಕುರಿಹಟ್ಟಿ ವಿಶ್ವನಾಥ್ ಹಾಗೂ ಎಂ.ಬಿ. ಅಯ್ಯನಹಳ್ಳಿ ರಂಗಪ್ಪ ಉಪಸ್ಥಿತರಿದ್ದರು.





