ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಎರಡನೇ ಬೆಳೆಗೆ ನೀರು ಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು ಕಂಪ್ಲಿ ಬಂದ್‌ಗೆ ಕರೆಕೊಟ್ಟು ಪ್ರತಿಭಟನೆ ನಡೆಸಿದವು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಹಲವು ರೈತ ಸಂಘಟನೆಯೊಂದಿಗೆ ಎರಡನೇ ಬಾರಿ ನೀರು ಬಿಡಲು ಆಗ್ರಹಿಸಿ ಕಂಪ್ಲಿ ಬಂದ್ ಮಾಡಿ ಪ್ರತಿಭಟಿಸಲಾಯಿತು. ಇದಕ್ಕೆ ನಗರದ ಅಂಗಡಿ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬೆಂಬಲ ಸೂಚಿಸಿದರು. ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಮುಖಂಡ ಬಿ.ವಿ.ಗೌಡ ಮಾತನಾಡಿ, “2025ರ ಜೂನ್ 27 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸರಕಾರ ತೀರ್ಮಾನಿಸಿದಂತೆ ಜುಲೈ ತಿಂಗಳ ಕೊನೆಗೆ ಅಥವಾ ಆಗಸ್ಟ್ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರುಗಳನ್ನು ಒಳಗೊಂಡಂತೆ ಕರ್ನಾಟಕ ಮತ್ತು ಟಿ ಬಿ ಬೋರ್ಡ್ ಎಲ್ಲಾ ಅಧಿಕಾರಿಗಳು ಸಮುಖದಲ್ಲಿ ‘ತುಂಗಾಭದ್ರಾ ಜಲಾಶಯದ ಗೇಟ್‌ಗಳ ದುರಸ್ಥಿ ವಿಷಯ, ಬೇಸಿಗೆ ಬೆಳೆಯ ವಿಷಯವನ್ನು ತೀರ್ಮಾನಿಸುತ್ತೇವೆ’ ಎಂದು ಹೇಳಲಾಗಿತ್ತು. ಆದರೆ, ಇಲ್ಲಿವರೆಗೂ ಸಭೆ ಕರೆದಿಲ್ಲ. ಈಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಎಲ್ಲಾ ಭಾಗದ ರೈತರು, ಈ ಕೂಡಲೇ ತುಂಗಾಭದ್ರಾ ಕೇಂದ್ರಸ್ಥಾನದಲ್ಲಿ ಸಭೆ ಕರೆದು ಬೇಸಿಗೆ ಬೆಳೆಗೆ ನೀರು ಬಿಡಬೇಕು” ಎಂದು ಅಗ್ರಹಿಸಿದರು.


“ಈ ಬಾರಿಯ ಭತ್ತದ ಬೆಳೆಯಲ್ಲಿ ದುಂಡಾಣು ಮಚ್ಚೆ ರೋಗ (ವೈರಸ್ ಪೀಡಿತ ಎಲೆ ಒಣಗುವ ರೋಗ) ಹೆಚ್ಚಾಗಿದ್ದು, ಇಳುವರಿ ಬಹಳ ಕುಂಠಿತವಾಗಿದೆ ಮತ್ತು ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಎಂಎಸ್‌ಪಿ ಗಿಂತ ಬಹಳ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಈಗ ತುಂಗಭದ್ರಾ ಜಲಾಶದಲ್ಲಿ ಅಂದಾಜು 80 ಟಿಎಂಸಿ ನೀರು ಇದ್ದು, ಎರಡನೇ ಬೆಳೆಗೆ ರೈತರಿಗೆ ನೀರು ಬಿಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಳ್ಳಾರಿ | ಬಿಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರ ಆರೋಪ; ಪಿಎಸಿ ಸದಸ್ಯರ ಆಕ್ರೋಶ
“ಕೂಡಲೇ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಮುನಿರಾಬಾದ್ ಕೇಂದ್ರ ಕಚೇರಿಯಲ್ಲಿ ಸಭೆ ಕರೆಯಬೇಕು. ಮತ್ತು ಸಭೆಯಲ್ಲಿ ಎಲ್ಲಾ ರೈತ ಮುಖಂಡರಿಗೆ ಮತ್ತು ರೈತರಿಗೆ ಅವಕಾಶ ಕಲ್ಪಿಸಬೇಕು. ಪ್ರಸ್ತುತ ಜಲಾಶಯದಲ್ಲಿರುವ ಅಂದಾಜು 80 ಟಿ.ಎಂ.ಸಿ ನೀರು ಇದ್ದು, ಬೇಸಿಗೆ ಬೆಳೆಗೆ ನೀರು ಒದಗಿಸಬೇಕು. ಫೆಬ್ರವರಿ-2026 ರ ವರೆಗೆ ಜಲಾಶಯದಲ್ಲಿರುವ ನೀರನ್ನು ಎರಡನೇ ಬೆಳೆಗೆ ಸದ್ಬಳಕೆ ಮಾಡಬೇಕು. ನಂತರ ತಜ್ಞರ ಪ್ರಕಾರ ಗೇಟ್‌ಗಳ ದುರಸ್ಥಿ ಕಾರ್ಯ ಬೇಗ ಮುಗಿಸಲು ಪ್ರಯತ್ನಿಸಬೇಕು. ಆಯೋಗದ ವರದಿಯಲ್ಲಿ ಇರುವಂತೆ ಟಿ.ಬಿ ಬೋರ್ಡ್ ಸೆಕ್ರೆಟರಿಯವರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಈ ಮೂರು ರಾಜ್ಯದಲ್ಲದವರನ್ನು ನೇಮಿಸಬೇಕು” ಎಂದು ರೈತರು ಹಕ್ಕೊತ್ತಾಯ ಮಂಡಿಸಿದರು.
ಈ ವೇಳೆ ಹೇಮಯ್ಯ ಸ್ವಾಮಿ, ಆನಂದ ರೆಡ್ಡಿ, ವಿ. ವೀರೇಶ್, ಕೊಟ್ಟೂರ್ ರಮೇಶ್, ಮುರಾರಿ, ತಿಮ್ಮಪ್ಪ ನಾಯಕ, ಗಂಗಣ್ಣ, ಸುಧೀರ್, ಬಸವರಾಜ್ ಗೌಡ, ಆಳಲ್ಲಿ ವೀರೇಶ್, ಪಂಪಾಪತಿ, ನಾರಾಯಣ ರೆಡ್ಡಿ, ನಾರಾಯಣಪ್ಪ, ವೆಂಕಟರಮಾರಾಜು, ಸುಗಪ್ಪ, ಸದಾಶಿವಪ್ಪ, ಕನಕಗಿರಿ ಬಸವರಾಜ್, ನೂರಾರು ರೈತರು ಹಾಗೂ ಇತರರು. ಉಪಸ್ಥಿತರಿದ್ದರು.





