ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಗೋಶಾಲೆ ನಿರ್ಮಾಣಕ್ಕಾಗಿ ಕೋರಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಒತ್ತಾಯಿಸಿದೆ.
ಕಂಪ್ಲಿ ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಭೇಟಿ ಮಾಡಿದ ಸಮಿತಿಯ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ರಾಮಸಾಗರ ಗ್ರಾಮದ ಮಾನಸ ಗಂಗೋತ್ರಿ ಸೇವಾ ಟ್ರಸ್ಟ್ ಗ್ರಾಮದ ವ್ಯಾಪ್ತಿಯ ಸರ್ಕಾರಿ ಭೂಮಿಯ ವಿವಿಧ ಸರ್ವೇ ನಂಬರ್‌ಗಳಲ್ಲಿ ಗೋಶಾಲೆ ನಿರ್ಮಾಣಕ್ಕಾಗಿ ಇಟ್ಟಿರುವ ಬೇಡಿಕೆಯ ಅರ್ಜಿಯನ್ನು ಈ ಕೂಡಲೇ ತಿರಸ್ಕರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಸಮಿತಿಯ ಮುಖಂಡರ ವಸಂತ ರಾಜ್ ಕಹಳೆ, “ರಾಮಸಾಗರ ಗ್ರಾಮದ ಸರ್ಕಾರ ಭೂಮಿಯ ಸರ್ವೇ ನಂ.848, 848, 794, 849, 900ಎ/2 ಮತ್ತು 9000/3 ಇನ್ನಿತರ ಸರ್ವೇ ನಂಬರ್‌ಗಳಲ್ಲಿ ವಿವಿಧ ಸಮುದಾಯದ ಭೂರಹಿತ ಕುಟುಂಬಗಳು 20 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಅವರ ಭೂಮಿಯನ್ನು ಕಸಿದುಕೊಳ್ಳಬಾರದು” ಎಂದು ಆಗ್ರಹಿಸಿದ್ದಾರೆ.
“ಸದರಿ ಕುಟುಂಬಗಳು ಅಕ್ರಮ-ಸಕ್ರಮಕ್ಕಾಗಿ ಫಾರಂ-57ನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದು, ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ಪಟ್ಟಕ್ಕಾಗಿ ಹತ್ತಾರು ಮನವಿ ಪತ್ರಗಳನ್ನು ಸಲ್ಲಿಸಿದ್ದಾರೆ. ಆದರೂ, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಭೂರಹಿತ ಕುಟುಂಬಗಳಿಗೆ ಅಸಮಧಾನ ತಂದಿದೆ” ಎಂದಿದ್ದಾರೆ.
“ಗೋಶಾಲೆಗಳೆಲ್ಲವೂ ಹೆಸರಿಗೆ ಮಾತ್ರ ನಿರ್ಮಾಣವಾಗಿ ಈ ಯೋಜನೆಯು ಕೆಲವರಿಗೆ ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಯಾವುದೇ ಕಾರಣಕ್ಕೂ ಗ್ರಾಮದ ವ್ಯಾಪ್ತಿಯಲ್ಲಿ ಭೂರಹಿತ ಕುಟುಂಬಗಳು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯಲ್ಲಿ ಗೋಶಾಲೆಗೆ ಭೂಮಿ ಮಂಜೂರಾತಿ ಮಾಡಬಾರದು” ಎಂದು ಆಗ್ರಹಿಸಿದ್ದಾರೆ.
ಹಕ್ಕೊತ್ತಾಯ ಪತ್ರ ಸಲ್ಲಿಸುವ ವೇಳೆ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಗಂಗಾಧರ್, ಹಸಿರುಸೇನೆಯ ದೊಡ್ಡ ಬಸಪ್ಪ ಹಾಗೂ ಬಗರ್ ಹುಕಂ ಸಾಗುವಳಿದಾರರು ಇದ್ದರು.




