ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿರವರ ಮೇಲೆ ರಾಕೇಶ್ ಕಿಶೋರ್ ಎಂಬ ಸನಾತನಿ ವಕೀಲ ಶೂ ಎಸೆದು ತನ್ನ ವಿಕೃತಿ ಮೆರೆದಿದ್ದಾನೆ. ಅವನನ್ನು ಯಾವುದೇ ಕಾರಣಕ್ಕೆ ಕ್ಷಮಿಸದೆ ಆತನ ಮೇಲೆ ಸುವೋ ಮೋಟೋ ಕೇಸ್ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿಯ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರಗತಿಪರ ಮತ್ತು ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಇದು ಕೇವಲ ಬಿ ಆರ್ ಗವಾಯಿಗಳ ಮೇಲೆ ನಡೆದ ದಾಳಿಯಲ್ಲ; ನಮ್ಮ ಸಂವಿಧಾನದ ಮೇಲೆ ನಡೆಸಿದ ದಾಳಿಯಾಗಿದೆ. ದಲಿತ ನ್ಯಾಯಮೂರ್ತಿ ಒಬ್ಬ ಸರ್ವೋಚ್ಚ ನ್ಯಾಯಾಲಯದಲ್ಲಿ ಕುಳಿತುಕೊಳ್ಳುವುದನ್ನು ಸಹಿಸದ ಸನಾತನವಾದಿಗಳು ಈ ದುಷ್ಕೃತ್ಯ ಎಸಗಿದ್ದಾರೆ. ಅವರ ಮೇಲೆ ಕಠಿಣವಾದ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕು” ಎಂದರು.
“ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಾಕುವ ಪರಸ್ಪರ ದ್ವೇಷ ಹಾಗೂ ಅಸಹನೆಯನ್ನು ಹುಟ್ಟು ಹಾಕುವಂತಹ ಸನಾತನಿ ರಾಕೇಶ್ ಕಿಶೋರ್ ಎಂಬ ಮನುವಾದಿಯನ್ನು ನಾವು ಯಾವುದೇ ಕಾರಣಕ್ಕೂ ಕ್ಷಮಿಸಬಾರದು. ನಾತುರಾಮ್ ಗೋಡ್ಸೆ ಅಂತ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಬಿಂಬಿಸಲು ಹೊರಟಿರುವ ರೀತಿಯಲ್ಲಿಯೇ ಈ ಪುಂಡ ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರಗಿಸಬೇಕಾದ ಅವಶ್ಯಕತೆ ಇದೆ” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಬಳ್ಳಾರಿ | ಮಾನಸಿಕ ಒತ್ತಡ ನಿವಾರಿಸಲು ಸಾಮಾಜಿಕ ಸಂವಹನ ಬೆಳಿಸಿಕೊಳ್ಳಿ: ನ್ಯಾ. ರಾಜೇಶ್ ಹೊಸಮನೆ
ಈ ವೇಳೆ ದಲಿತ ನಾಯಕ ಗೋವರ್ಧನ್, ವಿಕೆ ಬಸಪ್ಪ, ಸಂಗನಕಲ್ಲು ವಿಜಯಕುಮಾರ್, ಕಲ್ಲುಕಂಬ ಪಂಪಾಪತಿ, ಎಲ್ ಮಾರಣ್ಣ, ರಾಜಶೇಖರ್, ಜಗನ್, ವಿಜ್ಞೇಶ್, ಸೋಮು ಕೊಳಗಲ್, ಮಾರೇಶ್ ಉಮೇಶ್ ಗೌಡ, ಗಾದೆಪ್ಪ, ಹುಮಾಯುನ್ ಖಾನ್, ಹರಿವಾಣ ಮಲ್ಲಿ, ಶ್ರೀನಿವಾಸ್ ಭಂಡಾರಿ, ಕೊಡ್ಲೆ ಮಲ್ಲಿಕಾರ್ಜುನ, ಅರುಣ್ ಕುಮಾರ್, ಸಣ್ಣ ನಾಗರಾಜ್, ಕೊಳಗಲ್ಲು ಎರ್ರಿಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.





