ಕಾಯಿಸಿದ್ದು ಸಾಕು, ಕಣ್ಣೊರೆಸಿದ್ದು ಸಾಕು, ಕಾನೂನು ನೆಪ ಮುಂದೊಡ್ಡಿದ್ದು ಸಾಕು, ಈಗ ನಮ್ಮಯ ಹಕ್ಕು ನಮ್ಮದಾಗಲೇಬೇಕು ಎಂಬ ಘೋಷವಾಕ್ಯದಡಿಯಲ್ಲಿ ಭೂಮಿ ಮತ್ತು ವಸತಿಗಾಗಿ ರಾಜ್ಯವ್ಯಾಪಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಭೂಮಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಈ ಕುರಿತು ಕರಿಯಪ್ಪ ಗುದಿಮನಿ ಮಾತನಾಡಿ, “ಉಳುವವರಿಗೆ ಭೂಮಿ ನಿನಾದದೊಂದಿಗೆ ಸ್ವತಂತ್ರಗೊಂಡ ಭಾರತದಲ್ಲಿ 79 ವರ್ಷಗಳಾದರೂ ಕೋಟ್ಯಂತರ ಬಡ ಕುಟುಂಬಗಳು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದರೂ ತುಂಡು ಭೂಮಿ ಇಲ್ಲವಾಗಿದೆ. ಉಳುಮೆಗೆ ಮಾತ್ರವಲ್ಲ ಇರಲಿಕ್ಕೂ ತುಂಡು ಜಾಗ ಇಲ್ಲ. ಸತ್ತ ಮೇಲೂ ಹೂಳಲು ಪರದಾಟ ಶುರುವಾಗಿದೆ. ಭೂಮಿಯೆಲ್ಲಾ ಬಲಾಢ್ಯರ ಕೈಯಲ್ಲಿದೆ. ಕಾಯ್ದೆ ತಿದ್ದುಪಡಿ ಮಾಡಿ ಮನಸೋ ಇಚ್ಛೆ ಭೂಮಿ ಖರೀದಿಸಲು ಅವಕಾಶ ನೀಡಲಾಗುತ್ತಿದೆ. ಕಂಪನಿಗಳು ಮತ್ತು ರಾಜಕಾರಣಿಗಳು ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬಳಿ ಇದ್ದ ಬದ್ದ ಭೂಮಿಗಳ ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ಬಡವರ ಪರ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೇ ಹಾದಿಯನ್ನು ಹಿಡಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ | ಎರಡನೇ ಬೆಳೆಗೆ ನೀರು ಬಿಡಲು ಒತ್ತಾಯ; ಕಂಪ್ಲಿ ಬಂದ್ ಮಾಡಿ ಪ್ರತಿಭಟನೆ
“ದೇವರಾಜ್ ಅರಸು ಅವರು “ಉಳುವವನೆ ಭೂ ಒಡೆಯ” ನೀತಿಯನ್ನು ಜಾರಿ ಮಾಡಿದಂತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸರ್ಕಾರವಾಗಿ ಕಾಂಗ್ರೆಸ್ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಬೇರೆ ಭೂಮಿ ಅಥವಾ ಮನೆ ಹೊಂದಿಲ್ಲದವರಿಗೆ ನ್ಯಾಯ ದೊರಕಿಸಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ “ಒನ್ ಟೈಮ್ ಸೆಟಲ್‌ಮೆಂಟ್” ಮೂಲಕ ಭೂಮಿ ಹಕ್ಕು ಮಾನ್ಯವಾಗಬೇಕು. ವಸತಿ ಹೀನರಿಗಾಗಿ ರಾಜ್ಯವ್ಯಾಪಿ ಸಮಗ್ರ ಮೆಗಾ ವಸತಿ ಯೋಜನೆ ಘೋಷಣೆಯಾಗಬೇಕು. ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ಧ ಹಕ್ಕು ದೊರಕುವತಾಗಬೇಕು. ಸಾಮಾಜಿಕ ನ್ಯಾಯಕ್ಕಿಂತ ಮಿಗಿಲಾದ ನ್ಯಾಯದ ತಕ್ಕಡಿ ಮತ್ತೊಂದಿಲ್ಲ. ಉಳ್ಳವರಿಗೆ ಕೊಟ್ಟಿದ್ದು ಸಾಕು. ಬಡವರಿಗೆ ಅವರ ಪಾಲು ದಕ್ಕಲೇಬೇಕು. ರಾಜ್ಯಾದ್ಯಂತ ನಿರಂತರ ಜನಜಾಗೃತಿ ಜಾಥಾ-ಪ್ರತಿಭಟನೆ-ಜನಾಂದೋಲನಗಳಾಗಿ ನಡೆಯುತ್ತವೆ. ನ್ಯಾಯ ದಕ್ಕುವವರೆಗೆ ಹೋರಾಟ ನಿಲ್ಲಲಾರದು” ಎಂದು ಎಚ್ಚರಿಸಿದರು.





