ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿದ್ದು, ಓರ್ವ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಹಾಸ್ಟೆಲ್ ವಾರ್ಡನ್ ಸೇರಿದಂತೆ 7 ಮಂದಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಿಸಲಾಗಿದೆ.
ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ‘ಗುರುಕುಲ ಕಾನ್ಸೆಪ್ಟ್ ಸ್ಕೂಲ್’ ಎಂಬ ವಸತಿ ಶಾಲೆಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಜಗಳದ ನಡುವೆ ಕುಪಿತಗೊಂಡ ಆರೋಪಿ ವಿದ್ಯಾರ್ಥಿ, ಕಬ್ಬಿಣದ ರಾಡ್‌ನಿಂದ ಸಹಪಾಠಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಆತನನ್ನು ನಡೆಯಲು ಬಂದ ವಾರ್ಡನ್ ಮೇಲೂ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾರ್ಡನ್ ಮತ್ತು ಇತರ ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿ ನಡೆಸಿರುವ ಆರೋಪಿ ವಿದ್ಯಾರ್ಥಿ ಪರಾರಿಯಾಗಿದ್ದಾನೆ. ಆತನನಿಗಾಗಿ ಪೊಲೀಸರು ಹುಟುಕಾಟ ನಡೆಸುತ್ತಿದ್ದಾರೆ. ಗಾಯಗೊಂಡಿರುವ ಎಲ್ಲರನ್ನೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.




