ಕೇಂದ್ರ ಸರ್ಕಾರದ ಶ್ರಮ ಶಕ್ತಿ ನೀತಿಗಳನ್ನು ವಿರೋಧಿಸಿ ಬುಧವಾರ 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ರಾಜ್ಯಾದ್ಯಂತ ಹಲವಾರು ಕಾರ್ಮಿಕ ಸಂಘಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆದಾರೂ ದೈನಂದಿನ ಜನಜೀವನದ ಮೇಲೆ ಹೆಚ್ಚಾಗಿ ಪರಿಣಾಮ ಬೀರಲಿಲ್ಲ, ಸಾರ್ವಜನಿಕ ಸಾರಿಗೆ, ಶಾಲೆಗಳು ಮತ್ತು ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನಾ ಚಟುವಟಿಕೆಗಳು ನಡೆದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಕಾರ್ಮಿಕ ಸಂಘಗಳ ಸದಸ್ಯರು ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿ, ಕಾರ್ಮಿಕ ಕಾನೂನುಗಳಿಗೆ ಪ್ರಸ್ತಾವಿತ ತಿದ್ದುಪಡಿಗಳು, ಕೆಲಸದ ಸಮಯವನ್ನು ವಿಸ್ತರಿಸುವುದು ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದರು.
ರಾಜ್ಯದ ಇತರೆಡೆಗಳಲ್ಲಿಯೂ ಪ್ರತಿಭಟನೆಗಳು ಇದೇ ರೀತಿಯ ಧಾಟಿಯಲ್ಲಿ ನಡೆದವು. ಹುಬ್ಬಳ್ಳಿಯಲ್ಲಿ, ಕಾರ್ಮಿಕ ಸಂಘಗಳ ಜಂಟಿ ಸಮಿತಿಯೊಂದಿಗೆ ಸಂಯೋಜಿತವಾಗಿರುವ ಕಾರ್ಮಿಕ ಸಂಘಗಳ ಸದಸ್ಯರು ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಮೆರವಣಿಗೆಯನ್ನು ಆಯೋಜಿಸಿದ್ದರು. ಇದನ್ನು ಅವರು ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಯೆಂದು ಬಣ್ಣಿಸಿದರು.
ಮೈಸೂರಿನಲ್ಲಿ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಇತರ ಕಾರ್ಮಿಕ ಸಂಘಟನೆಗಳೊಂದಿಗೆ ಕೈಜೋಡಿಸಿ ಪ್ರತಿಭಟನಾ ರ್‍ಯಾಲಿ ನಡೆಸಿತು. ಬೀದರ್‌ನಲ್ಲಿ ಮಹಿಳಾ ಕಾರ್ಮಿಕರೂ ಕೂಡ ಸಕ್ರಿಯವಾಗಿ ಭಾಗವಹಿಸಿ, ರಾಜ್ಯಾದ್ಯಂತ ನಡೆದ ಜನಾಂದೋಲನಕ್ಕೆ ಬಲ ತುಂಬಿದರು.
“24 ಗಂಟೆಗಳ ಸಾರ್ವತ್ರಿಕ ಮುಷ್ಕರಕ್ಕೆ 10 ಕೇಂದ್ರ ಕಾರ್ಮಿಕ ಸಂಘಗಳು(CTUಗಳು) ಮತ್ತು ಹಲವಾರು ವಲಯ ಒಕ್ಕೂಟಗಳು ಹಾಗೂ ಸಂಘಗಳನ್ನು ಒಳಗೊಂಡಿರುವ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿದೆ. ಕೇಂದ್ರದ ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತವೆ. ಸಾಮಾಜಿಕ ಭದ್ರತೆಯನ್ನು ಕಡಿಮೆ ಮಾಡುತ್ತವೆ. ಈ ನೀತಿ ಸಂಹಿತೆಗಳು ಕಾರ್ಮಿಕ ವರ್ಗಕ್ಕಿಂತ ಕಾರ್ಪೊರೇಟ್‌ಗಳ ಪರವಾಗಿವೆ” ಎಂದು ಒಕ್ಕೂಟಗಳು ಆರೋಪಿಸಿದವು.
ಬಳ್ಳಾರಿ ಕಾರ್ಮಿಕ ಹಕ್ಕುಗಳನ್ನು ವಿರೋಧಿಸಿ ಪ್ರತಿಭಟನೆ
ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಿರುವುದನ್ನು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ತೀವ್ರವಾಗಿ ಖಂಡಿಸಿದ್ದು, ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಮಿಕ ಸಂಹಿತೆಗಳ ಜಾರಿಯನ್ನು ವಿರೋಧಿಸಿ ಇಂದು ಸಿಐಟಿಯು ವತಿಯಿಂದ ಬಳ್ಳಾರಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ. ಸತ್ಯಬಾಬು ಮಾತನಾಡಿ, “ರಾಜ್ಯ, ರಾಷ್ಟ್ರದಲ್ಲಿ ದುಡಿಯುವ ಜನರ ವಿರುದ್ಧ ಕಾರ್ಮಿಕ ನೀತಿ ಸಂಹಿತೆಗಳನ್ನು ತಂದಿರುವ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಮೋಸವೆಸಗಿದೆ. ನವೆಂಬರ್ 21ರಂದು ಜಾರಿಗೆ ತರಲಾದ 4 ಕಾರ್ಮಿಕ ಸಂಹಿತೆಗಳು ನಿರಂಕುಶ ಮತ್ತು ಪ್ರಜಾಸತ್ತಾತ್ಮಕ ಆದಿಸೂಚನೆಯ ಎಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುತ್ತವೆ. ಅಲ್ಲದೆ, ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ಧ್ವಸಗೊಳಿಸಿದೆ. ಅಸ್ತಿತ್ವದಲ್ಲಿದ್ದ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಜಾರಿಗೆ ತಂದ ದಿನದಿಂದಲೂ 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆ ಮತ್ತು ಸಿಐಟಿಯು ಈ ಕರಾಳ ಕಾರ್ಮಿಕ ಸಂಹಿತೆಗಳ ಜಾರಿಯನ್ನು ವಿರೋಧಿಸುತ್ತದೆ” ಎಂದರು.
“2019ರಲ್ಲಿ ವೇತನ ಸಂಹಿತ ಜಾರಿಗೆ ಬಂದ ನಂತರ ಪ್ರತಿಭಟನೆಗಳನ್ನು ನಡೆಸಲಾಯಿತು ಮತ್ತು ಜನವರಿ 2020ರಲ್ಲಿ ಸಾರ್ವತ್ರಿಕ ಮುಷ್ಕರ ನಡೆಯಿತು. ಉಳಿದ ಮೂರು ಕಾರ್ಮಿಕ ಸಂಹಿತೆಗಳು ಕೈಗಾರಿಕಾ ಸಂಬಂಧಗಳ ಸಂಹಿತೆ ಸಾಮಾಜಿಕ ಭದ್ರತಾಸಹಿತ ಔದ್ಯೋಗಿಕ ಸುರಕ್ಷತೆ ಆರೋಗ್ಯ ಹಾಗೂ ಕೆಲಸದ ಪರಿಸ್ಥಿತಿಗಳು ಸಮಿತಿ 2020ರ ಸೆಪ್ಟೆಂಬರ್ ಜಾರಿಗೆ ಬಂದ ನಂತರ ತಕ್ಷಣದ ಪ್ರತಿಭಟಗಳನ್ನು ನಡೆಸಲಾಯಿತು. ತೀವ್ರ ಪ್ರತಿರೋಧದ ಹೊರತಾಗಿಯೂ ಕೇಂದ್ರದಲ್ಲಿನ ಆಡಳಿತರೂಢ ಸರ್ಕಾರವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಧ್ಯಮ ವರದಿಗಳು ಟ್ವೆಟುಗಳ ಪ್ರಕಾರ ನವೆಂಬರ್ 21ರಂದು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊ ಮುಂದಾಗಿದ್ದು, ದೇಶದ ಕಾರ್ಮಿಕರ ಹಕ್ಕು ಕಿತ್ತುಕೊಂಡಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ಎ ಯಲ್ಲಮ್ಮ ಮಾತನಾಡಿ, “ಕರಡು ಶ್ರಮಶಕ್ತಿ ನೀತಿ-2025 ಕುರಿತು ನವೆಂಬರ್ 13ರಂದು ಸಚಿವಾಲಯ ಕರೆದ ಸಭೆಯಲ್ಲಿ ಕಾರ್ಮಿಕ ಸಂಹಿತೆ ರದ್ದುಗೊಳಿಸುವಂತೆ ಒತ್ತಾಯಿಸಲಾಗಿತ್ತು. ನವೆಂಬರ್ 20ರಂದು ಹಣಕಾಸು ಸಚಿವಾಲಯ ನಡೆಸಿದ ಬಜೆಟ್ ಪೂರ್ವ ಸಮಾವಲೋಚನೆ ಸಭೆಯಲ್ಲಿಯೂ 2015ರ ನಂತರ ನಡೆದಿರುವ ಐಎಲ್‌ಸಿಯನ್ನು ಕರೆಯವಂತೆ ಮತ್ತು ಸಂಹಿತೆಗಳನ್ನು ರದ್ದುಗೊಳಿಸುವಂತೆ ಜಂಟಿ ವೇದಿಕೆ ಪರವಾಗಿ ಒತ್ತಾಯಿಸಲಾಗಿತ್ತು, ಆದರೆ ಸರ್ಕಾರವು ಮೊಂಡುತನದಿಂದ ನಮ್ಮ ಒತ್ತಾಯಕ್ಕೆ ಸ್ಪಂದಿಸಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರ ಕಾರ್ಮಿಕ ಸಂಘಗಳ ಯಾವುದೇ ಮನವಿ, ಪ್ರತಿಭಟನೆ ಮತ್ತು ಮುಷ್ಕರಗಳನ್ನು ಗಣನೆಗೆ ತೆಗೆದುಕೊಳ್ಳದೆ ಉದ್ಯೋಗದಾತರ ಪ್ರತಿನಿಧಿಗಳು ಮತ್ತು ಬಿಎಂಎಸ್ ಹಾಗೂ ಇತರ ಬೆಂಬಲಿಗರು ಬಜೆಟ್ ಪೂರ್ವ ಸಮಾಲೋಚನಾ ಸಭೆಯಲ್ಲಿ ಇಟ್ಟ ಬೇಡಿಕೆಗಳನ್ನು ಈಡೇರಿಸಲು ಈ ಕೇಂದ್ರ ಸರ್ಕಾರವು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದ ಸರ್ಕಾರದ ಈ ನಡೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಪ್ರತಿಗಾಮಿ ಕಾರ್ಮಿಕ ವಿರೋಧಿ, ದುಡಿಯುವ ಜನರ ಮೇಲೆ ಮಾರಣಾಂತಿಕ ದಾಳಿಯಾಗಿದೆ. ಇದನ್ನು ಅತ್ಯಂತ ತೀವ್ರ ಮತ್ತು ಸಂಘಟಿತ ಹೋರಾಟದ ಮೂಲಕ ಎದುರಿಸಲಾಗುವುದು. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ 4 ಮಸೂದೆಗಳನ್ನು ಹಿಂಪಡೆದು ಕೂಲಿ ಕಾರ್ಮಿಕರ ಹಿತ ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ವರಿಸಿದರು.
ಎಂ ತಿಪ್ಪೇಸ್ವಾಮಿ, ಎಚ್ ಬಿ ಒಬೆಳೇಶಪ್ಪ, ಬಿ ಎಲ್ ಈರಣ್ಣ, ಹುಲಿಯಪ್ಪ, ಮಹಾಂತಮ್ಮ, ರುದ್ರಮ್ಮ, ಮಲ್ಲಮ್ಮ, ದಿವಾಕರ್,
ಟಿ ಜೆ ವಿಠ್ಠಲ್, ಪಾರ್ಥ ಸಾರಾಧಿ, ಜೆ ಚಂದ್ರ ಕುಮಾರಿ, ಕೆ ಎಂ ಗುರು ಸಿದ್ದಮೂರ್ತಿ, ಗೋಪಾಲ್ ಚಿಗಟೆರಿ ಹಾಗೂ ಇತರರು ಇದ್ದರು.
ರಾಯಚೂರು
ಕೇಂದ್ರ ಸರ್ಕಾರ ಜಾರಿಗೊಳಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿ ಮತ್ತು ಅಪ್ರಜಾಸತ್ತಾತ್ಮಕವಾಗಿರುವುದನ್ನು ಖಂಡಿಸಿ ಸಿಐಟಿಯು ರಾಯಚೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಅಂಬೇಡ್ಕರ್ ವೃತದವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

“ಕಾರ್ಮಿಕ ಸಂಹಿತೆಗಳು ದುಡಿಯುವ ಜನರ ಹಕ್ಕುಗಳು, ಭದ್ರತೆ ಮತ್ತು ಜೀವನೋಪಾಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ. ಸಂಹಿತೆಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಕಾರ್ಮಿಕರ ಅಭಿಪ್ರಾಯವನ್ನು ಲೆಕ್ಕಿಸದೆ ಸರ್ಕಾರ ಏಕಪಕ್ಷೀಯವಾಗಿ ಸಂಹಿತೆಗಳನ್ನು ಜಾರಿಗೊಳಿಸಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತಂದಿದೆ. ಉದ್ಯೋಗದಾತರ ಪರವಾಗಿ ರೂಪಿಸಲಾದ ಈ ಸಂಹಿತೆಗಳು ಕಾರ್ಮಿಕರ ಸಂಘಟನಾ ಹಕ್ಕು, ಕೆಲಸದ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಯನ್ನು ದುರ್ಬಲಗೊಳಿಸಲಿವೆ” ಎಂದರು.
“ನಿರುದ್ಯೋಗ ಮತ್ತು ಹಣದುಬ್ಬರ ಏರಿಕೆಯಾಗಿರುವ ಸಂದರ್ಭದಲ್ಲಿ ಇಂತಹ ನೀತಿಗಳನ್ನು ಜಾರಿಗೊಳಿಸುವುದು ದುಡಿಯುವ ವರ್ಗದ ಮೇಲೆ ನೇರ ದಾಳಿ ನಡೆಸುತ್ತಿದೆ. ಕಾರ್ಮಿಕರ ಹೋರಾಟಗಳು, ಮನವಿಗಳು ಮತ್ತು ಮುಷ್ಕರಗಳನ್ನು ನಿರ್ಲಕ್ಷಿಸಿ ಸಂಹಿತೆಗಳನ್ನು ಬಲವಂತವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಕಾರ್ಮಿಕರ ಮೇಲಿನ ಯುದ್ಧ ಘೋಷಣೆಯಾಗಿದೆ” ಎಂದು ಖಂಡಿಸಿದರು.
ಇದನ್ನೂ ಓದಿದ್ದೀರಾ? ಹಾಸನ | ಕಾರ್ಮಿಕರನ್ನು ನವಗುಲಾಮಗಿರಿಗೆ ತಳ್ಳುವ ‘ಶ್ರಮ ಶಕ್ತಿ ನೀತಿ-2025’ರ ಕರಡು ಪ್ರತಿ ಸುಟ್ಟು ಪ್ರತಿರೋಧ
ರಾಜ್ಯ ಸರ್ಕಾರವು ಈ ಸಂಹಿತೆಗಳಿಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ರೂಪಿಸಬಾರದು. ಕಾರ್ಮಿಕರು ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡು ಅಂಬೇಡ್ಕರ್ ವೃತ್ತದಲ್ಲಿ ಸಂಹಿತೆಗಳ ಅಧಿಸೂಚನಾ ಪ್ರತಿಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಎಚ್ ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿಎಸ್ ಶರಣ ಬಸವ, ಕೆಜಿ ವೀರೇಶ, ಶರಣಮ್ಮ, ಸುಲೋಚನಾ, ನರಸಮ್ಮ, ಗಿರಯಪ್ಪ, ನರಸಪ್ಪ, ಗಿರಿಯಮ್ಮ ಸೇರಿದಂತೆ ಇತರರು ಇದ್ದರು.





