ಭಾರತವು ವಿಶ್ವದ ಎರಡನೇ ಅತಿದೊಡ್ಡ ನೆಲಗಡಲೆ ಉತ್ಪಾದಕ ದೇಶ. ಗುಜರಾತ್, ಆಂಧ್ರಪ್ರದೇಶದ ನಂತರ ಕರ್ನಾಟಕದಲ್ಲಿ ಮುಖ್ಯವಾಗಿ ಶೇಂಗಾ ಬೆಳೆಯಲಾಗುತ್ತದೆ. ರೈತರು ಇದನ್ನು ವಾಣಿಜ್ಯದ ಬೆಳೆಯಾಗಿಯೂ ಬೆಳೆಯುತ್ತಾರೆ.
ನೆಲಗಡಲೆ(ಶೇಂಗಾ, ಕಡಲೆಕಾಯಿ, Peanut ಅಥವಾ Groundnut) ಭಾರತದಲ್ಲಿ ಅತ್ಯಂತ ಸಾಮಾನ್ಯವಾದ ಮತ್ತು ಅಗ್ಗದ ಒಣಹಣ್ಣು. ಇದನ್ನು ʼಬಡವರ ಬಾದಾಮಿʼ ಎಂತಲೂ ಕರೆಯುವುದು ಸಾಮಾನ್ಯವಾಗಿದೆ. ಆದರೆ ಇದು ಕೇವಲ ಸಸ್ತು ತಿಂಡಿಯಲ್ಲ; ಪೌಷ್ಟಿಕಾಂಶಗಳ ಭರ್ಜರಿ ಭಂಡಾರವಾಗಿದೆ. ವೈಜ್ಞಾನಿಕ ಅಧ್ಯಯನಗಳು ಇದರ ಆರೋಗ್ಯ ಪ್ರಯೋಜನಗಳನ್ನು ಸಾಬೀತುಪಡಿಸಿವೆ. ಹೃದಯ ಆರೋಗ್ಯದಿಂದ ಹಿಡಿದು ತೂಕ ನಿಯಂತ್ರಣ, ಮಧುಮೇಹ ತಡೆಗಟ್ಟುವಿಕೆ ಮತ್ತು ದೀರ್ಘಾಯುಷ್ಯಕ್ಕೆ ಸಹಾಯಕವಾಗಿದೆ. ಅಂತೆಯೇ ಇದರಲ್ಲಿ ಅಡಗಿರುವ ಅಪಾಯಗಳನ್ನೂ ನಾವು ನಿರ್ಲಕ್ಷಿಸಬಾರದು.
ಹಿಂಗಾರು ಹಂಗಾಮಿನಲ್ಲಿ ಬೆಳೆದ ಶೇಂಗಾಕ್ಕೆ ಉತ್ತಮ ಬೆಲೆ ಸಿಗುತ್ತಿದೆ. ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ಜನವರಿ 23ರಿಂದಲೂ ದಾಖಲೆ ಮಟ್ಟದ ಬೆಲೆಗೆ ಶೇಂಗಾ ಮಾರಾಟವಾಗುತ್ತಿದ್ದು, ಬುಧವಾರ ಗರಿಷ್ಠ ದಾಖಲೆ ದರ ₹13,269ಕ್ಕೆ ಮಾರಾಟವಾಗಿದೆ.
ಗಡಿಭಾಗದ, ಆಂಧ್ರ ಪ್ರದೇಶದ ಹಿರೇಹಾಳ್ ಮಂಡಲಂನ ಮಲ್ಲಿಕೇತಿ ಗ್ರಾಮದ ರೈತ ಹನುಮಂತ ಎಂಬುವವರು ತಂದ 45 ಚೀಲ(6 ಕ್ವಿಂಟಲ್) ಶೇಂಗಾ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಹೆಚ್ಚು ಬೆಲೆಗೆ ಮಾರಾಟವಾಗಿದೆ. ಜನವರಿ 23ರಂದು 1 ಕ್ವಿಂಟಲ್ ಶೇಂಗಾ ಗರಿಷ್ಠ ₹10,259ಕ್ಕೆ ಮಾರಾಟವಾಗಿತ್ತು. ಬುಧವಾರದ ಮಾರುಕಟ್ಟೆಯಲ್ಲಿ ₹13,269ಕ್ಕೆ ಮಾರಾಟವಾಗಿದೆ. ಇದನ್ನು ದಾಟಿದರೂ ಅಚ್ಚರಿಯಿಲ್ಲವೆಂದು ಎಪಿಎಂಸಿ ಸಿಬ್ಬಂದಿ ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.
ಬಳ್ಳಾರಿ ಎಪಿಎಂಸಿಗೆ ನಿತ್ಯ ತಲಾ 30 ಕೆಜಿ ತೂಕದ 400ರಿಂದ 1000 ಚೀಲ ಶೇಂಗಾ ಬರುತ್ತಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್ಎಕ್ಯೂ ಗುಣಮಟ್ಟದ ಶೇಂಗಾಕ್ಕೆ ಕ್ವಿಂಟಲ್‌ಗೆ ₹7,263 ನಿಗದಿಯಾಗಿದೆ. ಮಾರುಕಟ್ಟೆ ದರ ಬೆಂಬಲ ಬೆಲೆಗಿಂತಲೂ ಅಧಿಕವಾಗಿದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
ಆಂಧ್ರದ ರೈತರಿಗೆ ಲಾಭ
ರೈತ ಮಹಿಳೆ ರೇಣುಕಾ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಬಳ್ಳಾರಿ ಜಿಲ್ಲೆಯಲ್ಲಿ ಶೇಂಗಾ ಕೃಷಿ ಕಡಿಮೆಯಿದೆ. ಜಿಲ್ಲೆಯ ಸಿರಗುಪ್ಪ ಸೇರಿದಂತೆ ಕೆಲವು ಭಾಗಗಳಿಂದ ಶೇಂಗಾ ಮಾರುಕಟ್ಟೆಗೆ ಬರುತ್ತದೆ. ಅಧಿಕವಾಗಿ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳ ರೈತರು ಹೆಚ್ಚು ಈ ಮಾಡುಕಟ್ಟೆಗೆ ಬರುತ್ತಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ರೈತರೂ ಕೂಡ ಬಳ್ಳಾರಿ ಎಪಿಎಂಸಿಗೆ ಶೇಂಗಾ ಮಾರಲು ಬರುತ್ತಾರೆ. ರಾಜ್ಯದ ಗಡಿ ಜಿಲ್ಲೆಯಲ್ಲಿ ಹೆಚ್ಚು ಶೇಂಗಾ ಫಸಲು ಇಲ್ಲದ ಕಾರಣ ಬೆಲೆ ಏರಿಕೆಯ ಲಾಭ ಆಂಧ್ರ ಭಾಗದ ರೈತರಿಗೆ ಸಿಗುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಪ್ರತಿ 100 ಗ್ರಾಂ ಶೇಂಗಾದಲ್ಲಿ(ಸಿಪ್ಪೆ ಸಹಿತ), ಬೀಜದ ಪ್ರಮಾಣ 75 ಗ್ರಾಂನಷ್ಟು ಇರಬೇಕು. ಇಂಥ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗುತ್ತಿದೆ. ಬೀಜದ ಪ್ರಮಾಣಕ್ಕೆ ಅನುಗುಣವಾಗಿ ಎಪಿಎಂಸಿಯಲ್ಲಿ ಬೆಲೆ ಸಿಗುತ್ತಿದೆ. ಈ ಬಾರಿ ಶೇಂಗಾ ಫಸಲು ಕಡಿಮೆಯಾಗಿರುವ ಕಾರಣ ಮಾರುಕಟ್ಟೆಗೆ ಶೇಂಗಾ ಹೆಚ್ಚು ಬರುತ್ತಿಲ್ಲ. ಹಾಗಾಗಿ ಬೇಡಿಕೆ ಹೆಚ್ಚಾಗಿದ್ದು, ಇರುವ ಫಸಲಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳೂ ಇವೆ. ಇದು ದಲ್ಲಾಳಿಗಳ ಪಾಲಾಗದೇ, ರೈತರಿಗೆ ನೇರವಾಗಿ ದೊರೆಯುವಂತಾಗಬೇಕು” ಎಂದರು.
ನೆಲಗಡಲೆ: ಬಡವರ ಬಾದಾಮಿಯಿಂದ ಆರೋಗ್ಯದ ಭಂಡಾರದವರೆಗೆ
ನೆಲಗಡಲೆಯ ಪೌಷ್ಟಿಕಾಂಶಗಳ ಸಂಪತ್ತು, 100 ಗ್ರಾಂ ಕಚ್ಚಾ ನೆಲಗಡಲೆಯಲ್ಲಿ ಸರಿಸುಮಾರು:
567 kcal, 25–26 ಗ್ರಾಂ(ಸಸ್ಯಾಹಾರಿಗಳಿಗೆ ಅತ್ಯುತ್ತಮ ಮೂಲ) ಪ್ರೋಟೀನ್, 49 ಗ್ರಾಂ(ಇದರಲ್ಲಿ ಬಹುತೇಕ ಆರೋಗ್ಯಕರ monounsaturated ಮತ್ತು polyunsaturated fats) ಕೊಬ್ಬು, 16 ಗ್ರಾಂ ಕಾರ್ಬೋಹೈಡ್ರೇಟ್, 8–9 ಗ್ರಾಂ ಫೈಬರ್, ವಿಟಮಿನ್ E, ನಿಯಾಸಿನ್(B3), ಫೋಲೇಟ್ ಅಂಶಗಳು ಹೇರಳವಾಗಿದೆ. ಮೆಗ್ನೀಷಿಯಂ, ಪೊಟಾಷಿಯಂ, ಐರನ್, ಝಿಂಕ್, ಸೆಲೆನಿಯಂ ಖನಿಜಗಳನ್ನು ಒಳಗೊಂಡಿದೆ. ಇತರೆ ರೆಸ್ವೆರಾಟ್ರಾಲ್, ಫ್ಲೇವನಾಯ್ಡ್‌ಗಳು, ಫೈಟೋಸ್ಟೆರಾಲ್‌ಗಳು ಮತ್ತು Co-enzyme Q10 ಇದು ಎಲ್ಲ 20 ಅಮಿನೋ ಆಸಿಡ್‌ಗಳನ್ನು ಹೊಂದಿದ್ದು, ಅರ್ಜಿನಿನ್ ಅಂಶ ಹೆಚ್ಚಾಗಿದೆ.

ಹೃದಯ ಆರೋಗ್ಯಕ್ಕೆ ಅತ್ಯುತ್ತಮ ಸ್ನೇಹಿ
ಅನೇಕ ದೊಡ್ಡ ಅಧ್ಯಯನಗಳ(ಉದಾ: Harvard T.H. Chan School of Public Health ಮತ್ತು JAMA Internal Medicine) ಪ್ರಕಾರ ನೆಲಗಡಲೆ ಸೇವನೆಯು ಹೃದಯರೋಗದ ಅಪಾಯವನ್ನು ಶೇ.20–40ರಷ್ಟು ಕಡಿಮೆ ಮಾಡುತ್ತದೆಂದು ತೋರಿಸಿವೆ. ಇದರ ಆರೋಗ್ಯಕರ ಕೊಬ್ಬುಗಳು LDL(ಕೆಟ್ಟ ಕೊಲೆಸ್ಟ್ರಾಲ್)ನ್ನು ಕಡಿಮೆ ಮಾಡಿ, HDL(ಒಳ್ಳೆಯದು) ಹೆಚ್ಚಿಸುತ್ತವೆ. ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತದೊತ್ತಡ ನಿಯಂತ್ರಣಕ್ಕೂ ಸಹಾಯಕವಾಗಿದೆ.
ಉದಾಹರಣೆಗೆ, ಒಂದು ಮೆಟಾ-ಅನಾಲಿಸಿಸ್‌ನಲ್ಲಿ ನೆಲಗಡಲೆ ಸೇವಿಸುವವರಲ್ಲಿ ಟ್ರೈಗ್ಲಿಸರೈಡ್ ಮಟ್ಟ -0.13 mmol/L ಕಡಿಮೆಯಾಗಿದೆ. ದೀರ್ಘಕಾಲದ ಸೇವನೆಯು ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನಲಾಗಿದೆ.
ತೂಕ ನಿಯಂತ್ರಣ ಮತ್ತು ದೇಹದಾರ್ಢ್ಯ
ನೆಲಗಡಲೆಯಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಇರುವುದರಿಂದ ಬೇಗ ಹಸಿವಾಗುವುದಿಲ್ಲ. ನೆಲಗಡಲೆ ಸೇವಿಸುವವರು ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸ್ಯಾಚುರೇಟೆಡ್ ಫ್ಯಾಟ್‌ಗಳಿಂದ ತುಂಬಿರುವ ಆಹಾರಗಳಿಗಿಂತ ಉತ್ತಮ ಆಯ್ಕೆ ಎಂಬುದು University of South Australia ಅಧ್ಯಯನಗಳಿಂದ ಸಾಬೀತಾಗಿದೆ. ಅಲ್ಲದೆ ವ್ಯಾಯಾಮ ಮಾಡುವವರಿಗೆ ಇದು ಸಸ್ಯಾಹಾರಿ ಪ್ರೊಟೀನ್ ಮೂಲವಾಗಿ ಅತ್ಯುತ್ತಮ ಪದಾರ್ಥವಾಗಿದೆ.
ಮಧುಮೇಹ ಮತ್ತು ರಕ್ತದ ಸಕ್ಕರೆ ನಿಯಂತ್ರಣ
ನೆಲಗಡಲೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದ ಸಕ್ಕರೆ ಏರಿಕೆ ಕಡಿಮೆಯಾಗುತ್ತದೆ. ಮೆಗ್ನೀಷಿಯಂ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ. ಅಧ್ಯಯನಗಳು ನೆಲಗಡಲೆ ಸೇವನೆಯು ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆಂದು ತೋರಿಸಿವೆ.
ಮೆದುಳು ಮತ್ತು ಮಾನಸಿಕ ಆರೋಗ್ಯ
ನಿಯಾಸಿನ್ ಮತ್ತು ವಿಟಮಿನ್ E ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತವೆ. 16 ವಾರ ನಿತ್ಯವೂ ಸ್ಕಿನ್-ರೋಸ್ಟೆಡ್ ನೆಲಗಡಲೆ ಸೇವಿಸಿದವರಲ್ಲಿ ಮೆದುಳಿನ ರಕ್ತಪರಿಚಲನೆ ಶೇ.3.6ರಷ್ಟು ಹೆಚ್ಚಾಗಿ, ವರ್ಬಲ್ ಮೆಮರಿ ಶೇ.5.8ರಷ್ಟು ಸುಧಾರಣೆ ಕಂಡುಬಂದಿದೆ. ಖಿನ್ನತೆ ಕಡಿಮೆ ಮಾಡಲೂ ಕೂಡ ನೆಲಗಡಲೆ ಸಹಾಯಕವಾಗಿದೆ ಎಂಬುದನ್ನು ಇತ್ತೀಚಿನ Clinical Nutrition, 2025 ಅಧ್ಯಯನ ಸಾಬೀತುಪಡಿಸಿದೆ.
ಕ್ಯಾನ್ಸರ್ ತಡೆಗಟ್ಟುವ ಗುಣಗಳು
ರೆಸ್ವೆರಾಟ್ರಾಲ್ ಮತ್ತು ಇತರ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಬಹುದು. ದೀರ್ಘಕಾಲದ ಅಧ್ಯಯನಗಳು ನೆಲಗಡಲೆ ಸೇವನೆಯು ಕೊಲೊರೆಕ್ಟಲ್, ಗ್ಯಾಸ್ಟ್ರಿಕ್, ಪ್ಯಾಂಕ್ರಿಯಾಟಿಕ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ.
ದೀರ್ಘಾಯುಷ್ಯ ಮತ್ತು ಒಟ್ಟಾರೆ ಆರೋಗ್ಯ
BMC Medicine, Peanut Instituteನಂತಹ ಅನೇಕ ಅಧ್ಯಯನಗಳು ದಿನಕ್ಕೆ ಸಣ್ಣ ಪ್ರಮಾಣ(20 ಗ್ರಾಂ) ನೆಲಗಡಲೆ ಸೇವಿಸುವುದು ಹೃದಯರೋಗ, ಕ್ಯಾನ್ಸರ್, ಉಸಿರಾಟದ ಸಮಸ್ಯೆಗಳು ಮತ್ತು ಒಟ್ಟಾರೆ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಬಹಿರಂಗಗೊಳಿಸಿವೆ.
ಅಪಾಯಗಳು ಮತ್ತು ಎಚ್ಚರಿಕೆಗಳು
ನೆಲಗಡಲೆಯ ಅತಿ ದೊಡ್ಡ ಅಪಾಯ ಆಫ್ಲಾಟಾಕ್ಸಿನ್(Aspergillus ಫಂಗಸ್‌ನಿಂದ ಉತ್ಪತ್ತಿಯಾಗುವ ವಿಷ). ಇದು ಲಿವರ್ ಕ್ಯಾನ್ಸರ್‌ಗೆ ಕಾರಣವಾಗಬಹುದು, ವಿಶೇಷವಾಗಿ ಹೆಪಟೈಟಿಸ್ B ಇರುವವರಲ್ಲಿ 60 ಪಟ್ಟು ಅಪಾಯ ಹೆಚ್ಚಾಗಿರುತ್ತದೆ. ದೀರ್ಘಕಾಲದ ಸೇವನೆಯು ಲಿವರ್ ಸಿರೋಸಿಸ್ ಅಥವಾ ಕ್ಯಾನ್ಸರ್ ತರುಬಹುದು. ಆದರೆ ಆರೋಗ್ಯಕರ ಸೇವನೆಯ ಪ್ರಯೋಜನಗಳು ಆಫ್ಲಾಟಾಕ್ಸಿನ್ ಅಪಾಯಕ್ಕಿಂತ ಹೆಚ್ಚು ಎಂಬುದನ್ನು PMC ಅಧ್ಯಯನಗಳು ತೋರಿಸಿವೆ.
ಎಚ್ಚರಿಕೆಗಳು: ದಿನಕ್ಕೆ 30–50 ಗ್ರಾಂ ನೆಲಗಡಲೆಯನ್ನು ನೆನೆಸಿ ತಿನ್ನುವುದರಿಂದ ಫೈಟೇಟ್ ಕಡಿಮೆಯಾಗಿ ಪೋಷಕಾಂಶ ಹೀರಿಕೊಳ್ಳುವಿಕೆ ಹೆಚ್ಚುತ್ತದೆ. ಹುರಿದ ಅಥವಾ ಬೇಯಿಸಿದ ನೆಲಗಡಲೆಗೆ ಹೆಚ್ಚಿನ ಆದ್ಯತೆ ನೀಡಿದರೆ ಒಳಿತು. ಆದರೆ ಅಲರ್ಜಿ ಇರುವವರು ನೆಲಗಡಲೆ ತಿನ್ನುವುದನ್ನು ತಪ್ಪಿಸಬಹುದು.
ಇದನ್ನೂ ಓದಿದ್ದೀರಾ? 2025ರ ಹಿನ್ನೋಟ | ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡ ರೈತರು: ಸಾಧನೆಗೈದ ಸಹೋದರಿಯರು
ನೆಲಗಡಲೆ ಕೇವಲ ಸಾಮಾನ್ಯ ತಿಂಡಿಯಲ್ಲ. ಇದು ಸಸ್ಯಾಹಾರಿಗಳಿಗೆ ಪ್ರೊಟೀನ್‌ನ ಅತ್ಯುತ್ತಮ ಮೂಲ, ಹೃದಯಕ್ಕೆ ಸ್ನೇಹಿ, ಮೆದುಳಿಗೆ ಚುರುಕು ಮತ್ತು ದೀರ್ಘಾಯುಷ್ಯಕ್ಕೆ ಸಹಾಯಕ. ಸರಿಯಾದ ಪ್ರಮಾಣದಲ್ಲಿ, ಸರಿಯಾದ ರೀತಿಯಲ್ಲಿ ದೈನಂದಿನ ಆಹಾರದಲ್ಲಿ ನೆಲಗಡಲೆ ಸೇವಿಸಿದರೆ ಇದು ಆರೋಗ್ಯಕ್ಕೆ ಉತ್ತಮ ಉಡುಗೊರೆಯಾಗಬಹುದು.
ಭಾರತವು ವಿಶ್ವದ ಎರಡನೇ ಅತಿದೊಡ್ಡ ನೆಲಗಡಲೆ ಉತ್ಪಾದಕ ದೇಶ. ಗುಜರಾತ್, ಆಂಧ್ರಪ್ರದೇಶದ ನಂತರ ಕರ್ನಾಟಕದಲ್ಲಿ ಮುಖ್ಯವಾಗಿ ಶೇಂಗಾ ಬೆಳೆಯಲಾಗುತ್ತದೆ. ರೈತರು ಇದನ್ನು ವಾಣಿಜ್ಯದ ಬೆಳೆಯಾಗಿಯೂ ಬೆಳೆಯುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೆಳೆ ಬೆಳೆಯುವುದು ಮತ್ತು ಇಳುವರಿ ಎರಡೂ ಕಡಿಮೆಯಾಗುತ್ತಿವೆ. ಕರ್ನಾಟಕದಲ್ಲಿ 863 kg/ha ಇಳುವರಿ ಇದೆ. ಡ್ರಿಪ್ ಇರಿಗೇಷನ್ ಮತ್ತು ಸಾವಯವ ಕೃಷಿಯಂತಹ ಪದ್ಧತಿಗಳನ್ನು ಅನುಸರಿಸುವುದರಿಂದ ನೆಲಗಡಲೆ ಇಳುವರಿಯನ್ನು ಹೆಚ್ಚಿಸಬಹುದು.





