ತಿಥಿ ಕಾರ್ಯಕ್ರಮಕ್ಕಾಗಿ ಆಮೆ ಪದಾರ್ಥ ತಯಾರಿಸಲು ಅಕ್ರಮವಾಗಿ ನದಿಯಲ್ಲಿ ಆಮೆಗಳನ್ನು ಬೇಟೆಯಾಡಿದ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ, ಬಳಿಕ ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಘಟನೆ ನಡೆದಿದೆ.
ನಗರದ ಸೋಮವತಿ ನದಿಯಲ್ಲಿ ನಾಲ್ಕು ಆಮೆಗಳನ್ನು ಬೇಟೆಯಾಡಿ ನದಿ ಬದಿಯಲ್ಲಿ ಅವುಗಳನ್ನು ಮಾಂಸ ಮಾಡಲು ಸಿದ್ಧತೆ ನಡೆಸುತ್ತಿದ್ದ ವೇಳೆ, ಖಚಿತ ಮಾಹಿತಿ ಮೇರೆಗೆ ಫೆ.14ರಂದು ಸಂಜೆ 3:30ರ ಸುಮಾರಿಗೆ ಸಬ್ ಇನ್ಸ್‌ಪೆಕ್ಟರ್ ಆನಂದ್ ಎಂ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದು, ಅವರ ಬಳಿಯಿದ್ದ ನಾಲ್ಕು ಸುಟ್ಟ ಆಮೆಗಳನ್ನು ಜಪ್ತಿ ಮಾಡಲಾಯಿತು.
ಅರಣ್ಯ ಇಲಾಖೆಯವರು ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಅಂಚೆಯ ಪೆರ್ಡಲ್ ಗ್ರಾಮದ ನಿರ್ಜಲ್ ನಿವಾಸಿ ಮಣಿಕಂಠ (42), ಮಂಗಳೂರು ನಗರದ ಮುಲ್ಕಿ ತಾಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ (54), ಮೂಡಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದ ವಿಘ್ನೇಶ್ (32) ಹಾಗೂ ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ಪ್ರಶಾಂತ್ (35) ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಸಂಬಂಧಿ ಅಜ್ಜಿ ದೇವಮ್ಮ ಅವರ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಫೆ.13ರಂದು ಆಗಮಿಸಿದ್ದರು. ಅಜ್ಜಿಗೆ ಇಷ್ಟವಾಗಿದ್ದ ಆಮೆ ಪದಾರ್ಥವನ್ನು ತಿಥಿ ಕಾರ್ಯಕ್ರಮದಲ್ಲಿ ಬಡಿಸಲು ಫೆ.14ರಂದು ಸೋಮವತಿ ನದಿಗೆ ಬೇಟೆಗೆ ತೆರಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರಿಗೆ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಫೆ.14ರ ರಾತ್ರಿ ಬಿಡುಗಡೆ ಮಾಡಲಾಗಿದೆ.
ಡಿವೈಎಸ್ಪಿ ರೋಹಿಣಿ ಸಿ.ಕೆ. ಹಾಗೂ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಐ ಆನಂದ್ ಎಂ, ಎಎಸ್‌ಐ ಕುಶಾಲಪ್ಪ, ಹೆಡ್ ಕಾನ್ಸ್ಟೇಬಲ್ ಪ್ರಮೋದ್, ಪಂಪಾಪತಿ, ಪ್ರಕಾಶ್, ಶ್ವೇತಾ, ಸವಿತಾ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.





