ಧರ್ಮಸ್ಥಳ ಗ್ರಾಮದ ಪಾಂಗಳ ರಸ್ತೆಯ ಸಮೀಪ ಯೂಟ್ಯೂಬರ್‌ಗಳ ಮೇಲೆ ನಡೆದ ಅಮಾನವೀಯ ಹಲ್ಲೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಸಮಿತಿ ವತಿಯಿಂದ ಬೆಳ್ತಂಗಡಿ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಧರ್ಮಸ್ಥಳದಲ್ಲಿ ಯುಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಪೂರ್ವಯೋಜಿತ ಮತ್ತು ಸಾಕ್ಷಿ ದೂರು ಪ್ರಕರಣ ದಿಕ್ಕು ತಪ್ಪಿಸಲು ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಒಂದು ಭಾಗ. ಅನ್ಯಾಯ ಕಂಡಲ್ಲಿ ಅದನ್ನು ಪ್ರಶ್ನೆ ಮಾಡುವುದು ನಮ್ಮ ಪಕ್ಷದ ಮೂಲ ಸಿದ್ಧಾಂತವಾಗಿದೆ. ಪ್ರಶ್ನೆ ಮಾಡುವುದನ್ನು ಮಾಡಿಯೇ ತೀರುತ್ತೇವೆ ಎಂದರು. ಅದು ಎಷ್ಟೇ ಬಲಾಡ್ಯರಾದರೂ ಸರಿ, ಹತ್ಯೆಗಳ ಬಗ್ಗೆ ಮೌನಕ್ಕೆ ಜಾರಿದ್ದ ಬಿಜೆಪಿ ಮುಖಂಡರು ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ನಮ್ಮ ಹೋರಾಟವನ್ನು ಅಣಕಿಸಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳ್ತಂಗಡಿ | ಹೊಸ ಸ್ಥಳದಲ್ಲಿ ಸಿಗದ ಅಸ್ಥಿಪಂಜರ; ತನಿಖೆ ಇನ್ನಷ್ಟು ತೀವ್ರ
ಬೆಳ್ತಂಗಡಿ ವಿಧಾನಸಭಾ ಸದಸ್ಯ ಸಲೀಂ ಗುರುವಾಯನಕೆರೆ ಮಾತನಾಡಿ, ಜನರಿಗೆ ಸತ್ಯವನ್ನು ತೋರಿಸುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ನಡೆದ ಹಲ್ಲೆ ಖಂಡನೀಯ. ಬಿಜೆಪಿ ಈ ಪ್ರಕರಣವನ್ನು ಹಿಂದೂ-ಮುಸ್ಲಿಂ ಮಾಡುವುದರಲ್ಲಿ ತಲ್ಲೀನವಾಗಿದೆ ಎಂದರು. ಕಾಂಗ್ರೆಸ್ ಬಿಜೆಪಿಯೊಂದಿಗೆ ಎಜಸ್ಟ್ಮೆಂಟ್ ರಾಜಕೀಯದಲ್ಲಿ ತೊಡಗಿದೆ. ಆದ್ರೆ ಎಸ್‌ಡಿಪಿಐ ಯಾವುದೇ ಭಯವಿಲ್ಲದೆ ನೇರವಾಗಿ ಹೋರಾಟದಲ್ಲಿದೆ ಎಂದು ಹೇಳಿದರು. ಅದೇ ರೀತಿ ಎಸ್‌ಡಿಪಿಐಯು ತಿಮರೋಡಿ ಅಥವಾ ಮಟ್ಟಣ್ಣನವರ ಪರವಾಗಿಲ್ಲ ಬದಲಾಗಿ ಸೌಜನ್ಯಳ ಪರವಾಗಿದೆ. ಯಾವುದೇ ಧರ್ಮದವನಿಗೂ ಅನ್ಯಾಯವಾದರು ನ್ಯಾಯ ಮರೀಚಿಕೆಯಾಗುವ ಹಂತದಲ್ಲಿದ್ದರೆ ಎಸ್‌ಡಿಪಿಐ ಹೋರಾಟದ ಮುಂಚೂಣಿಯಲ್ಲಿರುತ್ತದೆ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ, ವಿಧಾನಸಭಾ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಪ್ರಧಾನ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ರವೂಫ್ ಪುಂಜಾಲಕಟ್ಟೆ ಮತ್ತಿತರರು ಇದ್ದರು.





