ತಂಗಿಯ ಆರತಕ್ಷತೆ ಸಮಾರಂಭಕ್ಕೆ ಮೊಸರು ತರಲು ತೆರಳುತ್ತಿದ್ದ ಇಬ್ಬರು ಯುವಕರು ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬೇಲೂರು ತಾಲೂಕಿನ ಮುತುಗನೆ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಮುಂಜಾನೆ 6 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ KA-05 LE-4017 ನಂಬರಿನ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನೇನಹಳ್ಳಿ ಮೂಲದ ಲೋಕೇಶ್ (25) ಹಾಗೂ ರಾಮೇನಹಳ್ಳಿಯ ಕಿರಣ್ (32) ರಸ್ತೆಬದಿ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಇದನ್ನೂ ಓದಿ: ಹಾಸನ | ಬಟ್ಟೆ ತೊಳೆಯಲು ತೆರಳಿದ್ದ ದಂಪತಿ ಹೇಮಾವತಿ ನಾಲೆಗೆ ಬಿದ್ದು ಸಾವು
ದಾರಿಹೋಕರು ರಸ್ತೆಬದಿ ಚರಂಡಿಯಲ್ಲಿ ಮೃತದೇಹಗಳು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಬೇಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಿಗೆ ಈ ನೋವು ಆಘಾತ ತಂದಿದ್ದು, ಶೋಕಸಾಗರದಲ್ಲಿ ಮುಳುಗಿಸಿದೆ.





