ಬೆಂಗಳೂರು ನಗರ ಜಿಲ್ಲೆಯ ಗೊಟ್ಟಿಗೆರೆಯ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರ, ಉಳುಮೆ ಪ್ರತಿಷ್ಠಾನ ಸಹಕಾರದೊಂದಿಗೆ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ(ರಾಗಿ ಕಣ)ದಲ್ಲಿ ಡಿಸೆಂಬರ್ 7ರ ಭಾನುವಾರ ಬೆಳಿಗ್ಗೆ 10.30ರಿಂದ ಜಾಗತಿಕ ತಾಪಮಾನ ಮತ್ತು ಕೃಷಿಗೆ ಸಂಬಂಧಿಸಿದಂತೆ ಜಾಗೃತಿ ಸಮಾವೇಶ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಸೈಕ್ಲೋನ್‌ಗಳ ಹಾವಳಿ ಹೆಚ್ಚಾಗುತ್ತಿದ್ದು, ರಾಜ್ಯದ ಅರ್ಧದಷ್ಟು ಭೂಪ್ರದೇಶದಲ್ಲಿ ಕಳೆದ ಐದಾರು ವರ್ಷಗಳಿಂದ ಅಧಿಕ ಮಳೆಯಿಂದ ಬೆಳೆ ನಷ್ಟ ಉಂಟಾಗುತ್ತಿದೆ. ಇನ್ನುಳಿದ ಅರ್ಧದಷ್ಟು ಭೂಪ್ರದೇಶದಲ್ಲಿ ಮಳೆ ಇಲ್ಲದೇ ಬೆಳೆ ನಷ್ಟ ಉಂಟಾಗುತ್ತಿದೆ.
ಕೆಲವು ಭಾಗಗಳಲ್ಲಿ ಮಳೆಯು ಮುಂಗಾರಿಗಷ್ಟೇ ಸೀಮಿತವಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಮಳೆಯು ಹಿಂಗಾರಿಗಷ್ಟೇ ಸೀಮಿತವಾಗಿದೆ. ಅಂದರೆ ವರ್ಷದಲ್ಲಿ ಒಂದೇ ಫಸಲನ್ನು ಬೆಳೆಯುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ರೀತಿಯ ಹವಾಗುಣದಲ್ಲಾಗುತ್ತಿರುವ ಬದಲಾವಣೆಗೆ ಕಾರಣವಾದರೂ ಏನು? ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತದೆ.
ದಿನೇದಿನೆ ಬಿಸಿಲಿನ ತೀವ್ರತೆ ಹಾಗೂ ಭೂತಾಪಮಾನ ಹೆಚ್ಚಾಗುತ್ತಿದೆ. ಅನೇಕ ಪ್ರದೇಶಗಳಲ್ಲಿ 40° ಗಿಂತಲೂ ಅಧಿಕ ತಾಪಮಾನ ದಾಖಲಾಗಿದೆ. ಇಂಥದ್ದೇ ವಾತಾವರಣ ಮುಂದುವರೆದರೆ ಕೇವಲ 50 ರಿಂದ 60 ವರ್ಷಗಳಲ್ಲಿ ನಮ್ಮ ಭೂಮಿಯ ಮೇಲೆ ಯಾವುದೇ ಜೀವ ಸಂಕುಲವು ಬದುಕುಳಿಯಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದು ವಿಜ್ಞಾನಿಗಳು ಪದೇ ಪದೆ ಎಚ್ಚರಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಡಿ.7ರಂದು ಬಸವಕಲ್ಯಾಣದಲ್ಲಿ ಸೂಫಿ-ಸಂತರ ಸಮ್ಮೇಳನ
ಜಾಗತಿಕವಾಗಿ ಏರುತ್ತಿರುವ ಭೂತಾಪಮಾನದಿಂದ ಸಕಲ ಜೀವರಾಶಿಗಳಾದ ಕಾಡು-ನದಿಗಳು, ಸಮುದ್ರ-ಸರೋವರಗಳು, ಮಳೆ-ಮೋಡಗಳು, ಜಲಚರಗಳು, ಮರಗಿಡಗಳು, ಪ್ರಾಣಿಪಕ್ಷಿಗಳು, ಮನುಷ್ಯರು ಹೀಗೆ ಎಲ್ಲರೂ ಮತ್ತು ಎಲ್ಲವೂ ಸಂಕಷ್ಟದ ಜೀವನವನ್ನು ನಡೆಸುತ್ತಿವೆ. ಇದೇನಾದರೂ ನಿಜವಾದಲ್ಲಿ ನಮ್ಮ ಮಕ್ಕಳ ಮುಂದಿನ ಭವಿಷ್ಯ ಏನಾಗಬಹುದು? ಇಂತಹ ದುರ್ಘಟನೆ ಘಟಿಸುವ ಮುನ್ನವೇ ಇಂತಹ ಸಂದಿಗ್ಧ-ವಿಷಮ ಪರಿಸ್ಥಿತಿಯ ಬಗ್ಗೆ ಮನಗಾಣುವ, ಎಚ್ಚೆತ್ತುಗೊಳ್ಳುವ ಕಾರ್ಯಕ್ರಮ ಇದು. ಬನ್ನಿ… ಚರ್ಚಿಸೋಣ… ನಮ್ಮ ಉಳಿವಿಗಾಗಿ ಸುಳಿವನ್ನು ಹುಡುಕುವ ಪ್ರಯತ್ನ ಮಾಡೋಣ ಎಂದು ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದಿಂದ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರೊ. ಜಿ ಎಸ್ ಜಯದೇವ, ಕೆ ಪಿ ಸುರೇಶ್, ಅವಿನಾಶ್ ಟಿಜಿಎಸ್, ನಾಗೇಶ್ ಹೆಗಡೆ, ಎಂ ಸಿ ನರೇಂದ್ರ, ಡಾ. ಕೆ ಸಿ ಶಿವಾರೆಡ್ಡಿ ಮತ್ತು ಕೇಶವ ಮಳಗಿ ಭಾಗವಹಿಸಲಿದ್ದಾರೆ.






