ಸಮಾಜದಲ್ಲಿ ವಿಷಮತೆ ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ಪುಸ್ತಕಗಳಷ್ಟೇ ಮದ್ದಾಗಬಲ್ಲವು ಎಂದು ಕವಯತ್ರಿ ಹಾಗೂ ದೂರದರ್ಶನದ ಕಾರ್ಯಕ್ರಮ ಮುಖ್ಯಸ್ಥೆ ಎಚ್ ಎನ್ ಆರತಿ ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರಕಾಶಕರ ಸಂಘದಿಂದ ಇಂದು ಹಮ್ಮಿಕೊಂಡಿದ್ದ ತನ್ನ ನೂತನ ಜಾಲತಾಣಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
“ಒಂದು ಕಾಲದಲ್ಲಿ ನಾವೆಲ್ಲರೂ ಪುಸ್ತಕಗಳನ್ನು ನೋಡುತ್ತ, ಓದುತ್ತ ಬೆಳೆದವರು. ಅದು ನಮ್ಮಲ್ಲಿ ಒಂದು ಸಂಸ್ಕೃತಿಯನ್ನು ಬಿತ್ತಿತ್ತು. ಆದರೆ ಇಂದಿನ ಕೆಸರೆರಚಾಟ, ಕಿತ್ತಾಟಗಳ ಮಧ್ಯೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ಮತ್ತು ಯುವಜನರಲ್ಲಿ ಅರಿವಿನ ಜಾಗೃತಿ ಮೂಡಿಸುವಲ್ಲಿ ಪುಸ್ತಕಗಳು ಹೇಗೆ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ” ಎಂದರು.
ಕಾನೂನು ತಜ್ಞ ವೈ ಜಿ ಮುರಳೀಧರನ್ ಮಾತನಾಡಿ, “ಕನ್ನಡದಲ್ಲಿ ಪ್ರಕಟವಾಗುವ ಪುಸ್ತಕಗಳು, ಮಾರಾಟ ಮಳಿಗೆಗಳು, ಲೇಖಕರ ಪುಸ್ತಕಗಳ ಬಗ್ಗೆ ನಿಖರವಾದ ಮಾಹಿತಿ ಇಂದು ಸಿಗುತ್ತಿಲ್ಲ. ಪುಸ್ತಕ ಮಾರಾಟ ಮಾತ್ರವಲ್ಲದೆ ಪುಸ್ತಕ ಸಂಸ್ಕೃತಿಯನ್ನು ಹುಟ್ಟುಹಾಕುವ ಕೆಲಸ ಇಂದಿನ ತುರ್ತು ಅಗತ್ಯ” ಎಂದರು.
ನವಕರ್ನಾಟಕ ಪ್ರಕಾಶನದ ಆಡಳಿತ ನಿರ್ದೇಶಕ ಸಿದ್ದನಗೌಡ ಪಾಟೀಲ್ ಮಾತನಾಡಿ, “ಪುಸ್ತಕಗಳಲ್ಲಿ ಎರಡು ಬಗೆಗಳಿವೆ. ಒಂದು ಜನರಲ್ಲಿ ವೈಚಾರಿಕ ಜಾಗೃತಿ ಉಂಟುಮಾಡಿ ಮನೋವಿಕಾಸಕ್ಕೆ ಕಾರಣವಾಗುವ ಸಮ ಸಮಾಜ ನಿರ್ಮಾಣಕ್ಕೆ ಪೂರಕವಾದ ಪುಸ್ತಕಗಳು. ಎರಡನೆಯದು ಜನರಲ್ಲಿ ಮೌಢ್ಯವನ್ನು ಬಿಂಬಿಸುವ ಜನಪ್ರಿಯತೆ ಹೆಸರಿನಲ್ಲಿ ಅಗ್ಗದ ಸರಕನ್ನು, ಹುಸಿತನವನ್ನು ಪ್ರಕಾರ ಮಾಡುವ ಪುಸ್ತಕಗಳು. ಇವೆಲ್ಲವುಗಳ ಮಧ್ಯೆ ಜನಪ್ರೀತಿಯ ಮೂಲಕ ಸಮಸಮಾಜ ನಿರ್ಮಾಣಕ್ಕೆ ಸಮುದಾಯದ ಉನ್ನತಿಗಾಗಿ ಪೂರಕವಾದ ಪುಸ್ತಕಗಳನ್ನು ಪ್ರಕಟಿಸುವುದು ಕಷ್ಟದ ಮತ್ತು ಸವಾಲಿನ ಕೆಲಸ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಪಾಲಿಕೆ ಚುನಾವಣೆಗೆ ಮತ ಪತ್ರ ಬಳಕೆ: ಪ್ರಜಾಪ್ರಭುತ್ವ ಬಲಪಡಿಸುವ ಮಹತ್ವದ ಹೆಜ್ಜೆ; ವೆಲ್ಫೇರ್ ಪಾರ್ಟಿ
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ ವಸುಂಧರ ಭೂಪತಿ ಮಾತನಾಡಿ, “ಕರ್ನಾಟಕ ಸರ್ಕಾರ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಲ್ಲಿಸಿರುವ ಪುಸ್ತಕ ನೀತಿಯನ್ನು ಜಾರಿಗೆ ತರಬೇಕು. ತಮಿಳುನಾಡಿನ ಮಾದರಿಯಲ್ಲಿ ಸರ್ಕಾರ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಕನ್ನಡದ ಅತ್ಯುತ್ತಮ ಪುಸ್ತಕಗಳು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳಲು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕು” ಎಂದು ಒತ್ತಾಯಿಸಿದರು.
‘ಸಂಕಥನ’ದ ರಾಜೇಂದ್ರಪ್ರಸಾದ್, ‘ಬಹುರೂಪಿ’ಯ ಜಿ ಎನ್ ಮೋಹನ್, ‘ಅಭಿನವ’ದ ಎನ್ ರವಿಕುಮಾರ್ ಅಭಿಪ್ರಾಯ ಮಂಡಿಸಿದರು. ಕೆ ರಾಜಕುಮಾರ್ ವಂದಿಸಿದರು. ನಿಂಗರಾಜು ಚಿತ್ತಣ್ಣನವರ, ಆರ್ ಪೂರ್ಣಿಮಾ, ವಸುಧೇಂದ್ರ, ವಿಶಾಲಾಕ್ಷಿ ಶರ್ಮಾ, ಅನಿಲ ಹೊಸಮನಿ, ವಿದ್ಯಾರಣ್ಯ, ಶರಣಪ್ಪ, ರು. ಪ. ದೇಸಾಯಿ ಸೇರಿದಂತೆ ಹಲವು ಲೇಖಕರು, ಪ್ರಕಾಶಕರು ಇದ್ದರು.





