ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ದಿವ್ಯಾ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಈ ಘಟನೆ ಇದೇ ತಿಂಗಳ 4ರ ರಾತ್ರಿ 1.30ರ ಸುಮಾರಿಗೆ ಬೆಂಗಳೂರಿನ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಂ ಎಂ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆ ರಾತ್ರಿ ದಿವ್ಯಾ ಸುರೇಶ್ ಅತೀ ವೇಗದಲ್ಲಿ ಮತ್ತು ನಿರ್ಲಕ್ಷ್ಯವಾಗಿ ಕಾರು ಚಲಾಯಿಸುತ್ತಿದ್ದ ವೇಳೆ, ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಮೂವರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಕಿರಣ್ ಅನುಷಾ ಹಾಗೂ ಅನಿತಾ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಪೈಕಿ ಅನಿತಾ ಅವರ ಮಂಡಿಚಿಪ್ಪಿಗೆ ತೀವ್ರ ಪೆಟ್ಟಾಗಿದೆ.
ಅಪಘಾತದ ನಂತರ ದಿವ್ಯಾ ಸುರೇಶ್ ಕಾರನ್ನು ಕೂಡ ನಿಲ್ಲಿಸದೆ ಸ್ಥಳದಿಂದ ಪರಾರಿಯಾದರು ಎಂದು ದೂರುದಾರ ಕಿರಣ್ ಆರೋಪಿಸಿದ್ದಾರೆ. ಗಾಯಾಳು ಅನಿತಾ ಅವರನ್ನು ತಕ್ಷಣ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಕಾಲಿನ ಮಂಡಿ ಚಿಪ್ಪು ಮುರಿದಿದೆ ಎಂದು ದೃಢಪಡಿಸಿದ್ದಾರೆ. ನಂತರ ಅನಿತಾ ಅವರನ್ನು ಬಿಜೆಎಸ್ ಆಸ್ಪತ್ರೆಗೆ ಸ್ಥಳಾಂತರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸುಮಾರು ಎರಡು ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಗಾಯಾಳು ಸಂಬಂಧಿ ಕಿರಣ್ ಅಕ್ಟೋಬರ್ 7ರಂದು ಬ್ಯಾಟರಾಯನಪುರ ಸಂಚಾರಿ ಠಾಣೆಗೆ ಅಧಿಕೃತ ದೂರು ನೀಡಿದರು. ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಅಪಘಾತ ಮಾಡಿದ್ದ ಕಾರಿನ ನಂಬರ್ ಟ್ರೇಸ್ ಮಾಡಲಾಗಿದ್ದು, ಅದು ದಿವ್ಯಾ ಸುರೇಶ್ ಅವರ ಕಾರು ಎಂದು ದೃಢಪಟ್ಟಿದೆ.
ಇದನ್ನೂ ಓದಿ: ಬೆಂಗಳೂರು | ಆದ್ಯತೆ ಮೇಲೆ ರಸ್ತೆ ಕಾಮಗಾರಿ ಕೈಗೊಳ್ಳಿ: ರಾಜೇಂದ್ರ ಚೋಳನ್
ಪೊಲೀಸರು ಕಾರನ್ನು ವಶಕ್ಕೆ ಪಡೆದು ಸೀಜ್ ಮಾಡಿದ ನಂತರ, ದಿವ್ಯಾ ಸುರೇಶ್ ಅವರನ್ನು ವಿಚಾರಣೆಗಾಗಿ ಕರೆಸಿ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಆದರೆ, ದಿವ್ಯಾ ಸುರೇಶ್ ತಮ್ಮ ಕಾರನ್ನು ಅಂದು ರಾತ್ರಿಯೇ ಬಿಡಿಸಿಕೊಂಡು ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಘಟನೆ ಬಳಿಕವೂ ಗಾಯಾಳು ಕುಟುಂಬದವರನ್ನು ಸಂಪರ್ಕಿಸಲು ಅಥವಾ ಸಹಾಯ ಮಾಡಲು ದಿವ್ಯಾ ಸುರೇಶ್ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಲಾಗಿದೆ. ಸದ್ಯ, ಬ್ಯಾಟರಾಯನಪುರ ಸಂಚಾರಿ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.





