ಜನಪ್ರಿಯ ಕತೆಗಳಿಗೆ ಚಲನಚಿತ್ರಗಳ ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶ ಮೂಡಿಸುವ ಮೂಲಕ ಬಿ ಎಲ್ ವೇಣು ಅವರು ಹೊಸ ಅಧ್ಯಾಯವನ್ನು ಸೃಷ್ಟಿಸಿದರು ಎಂದು ಚಿಂತಕ ಹಾಗೂ ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಕೆಂಧೂಳಿ ವಾರಪತ್ರಿಕೆ ಬಳಗದಿಂದ ಕೊಡಮಾಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಬಿ ಎಲ್ ವೇಣು ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
“ಬಿ ಎಲ್ ವೇಣು ಅವರು ಜನಪ್ರಿಯ ಕತೆ, ಕಾದಂಬರಿಕಾರರು. ಸಹಜವಾಗಿಯೇ ಚಲನಚಿತ್ರಗಳ ಸಂಭಾಷಣೆಯ ಅವಕಾಶ ಬಂದಾಗ ಅದಕ್ಕೊಂದು ಸಾಹಿತ್ಯದ ಸ್ಪರ್ಶನೀಡಿ ಹೊಸ ಅರ್ಥ ಸೃಷ್ಟಿಸಿದರು” ಎಂದರು.
“ಸಮಾಜದ ದೊಡ್ಡ ಸಮಸ್ಯೆಯಾಗಿದ್ದ ಬೆತ್ತಲೆ ಸೇವೆಯಂಥ ಸಾಮಾಜಿಕ ಸಮಸ್ಯೆಯ ಕುರಿತು ಬರೆದ ಕಾದಂಬರಿ ಲಕ್ಷಾಂತರ ಜನರಿಗೆ ಅದರ ಅರಿವು ಮೂಡಿಸುವ ಮೂಲಕ ಅಂತಹ ಅನಿಷ್ಟ ಪದ್ದತಿಯನ್ನು ಹೋಗಲಾಡಿಸಲು ಕಾರಣವಾಯಿತು. ಅಲ್ಲದೆ ಅದು ಚಲನಚಿತ್ರವಾಗುವ ಮೂಲಕ ಮತ್ತಷ್ಟು ಜನರಿಗೆ ಅರಿವು ಮೂಡಿಸುವ ಕೆಲಸವಾಯಿತು” ಎಂದು ಅಭಿಪ್ರಾಯಪಟ್ಟರು.
“ಚಿತ್ರದುರ್ಗ ಇತಿಹಾಸವನ್ನು ಬರೆದ ವೇಣು ಅವರು ಅಪವಾದವಾಗಿದ್ದ ಹಿಂದೂ ಮುಸ್ಲಿಂನ ದ್ವೇಷಭಾವನೆಯನ್ನು ಅವರು ʼಕಲ್ಲರಳಿ ಹೂವಾಗಿʼ ಕಾದಂಬರಿ ಮೂಲಕ ಹಿಂದೂ ಮುಸ್ಲಿಂ ಸಾಮರಸ್ಯ ಹೇಗಿತ್ತು ಎನ್ನುವ ಅರಿವನ್ನು ಮೂಡಿಸಲು ಅವರು ಕಾರಣಕರ್ತರಾಗಿದ್ದಾರೆ. ಅಲ್ಲದೆ ಅದೂ ಕೂಡ ಚಿತ್ರವಾಗಿ ದೊಡ್ಡ ಯಶಸ್ಸನ್ನು ಪಡೆದಿದೆ ಎಂದರೆ ಅದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
“ವೇಣು ಅವರ ಗಟ್ಟಿ ನಿಲುವು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಜನಪ್ರಿಯ ಹಾಗೂ ಜನಪರ ಸಾಹಿತಿಯಾಗಿ ಸೃಜನಶೀಲತೆಯನ್ನು ಮೈಗೂಡಿಸಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ ಜನಪರ ನಿಲುವು ಹೊಂದಿದ ಸಾಹಿತಿ ಜನಪ್ರಿಯತೆ ಪಡೆಯುವುದು ಸುಲಭವಲ್ಲ. ನಂಬಿದ ನಿಲುವು, ಜನಪರ ಕಾಳಜಿಯನ್ನು ಅವರು ಜನಪ್ರಿಯ ಕಾದಂಬರಿಯಲ್ಲಿ ಮೂಡಿಸಿರುವ ರೀತಿ ಮಾದರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
“ಸಾಹಿತ್ಯ ಅಕಾಡೆಮಿಯಲ್ಲಿ ಜನಪ್ರಿಯ ಸಾಹಿತಿಗಳಿಗೆ ಜೀವಮಾನದ ಪ್ರಶಸ್ತಿ ನೀಡಲು ಹಿಂದೆ ಸರಿದ ಸಂದರ್ಭದಲ್ಲಿ ನಾನು ಅಕಾಡಮಿಯಲ್ಲಿದ್ದಾಗ ಅವರ ಒಟ್ಟು ಸಾಹಿತ್ಯಕ್ಕೆ ಜೀವಮಾನ ಪ್ರಶಸ್ತಿ ಕೊಡಿಸುವ ಮೂಲಕ ಜನಪ್ರಿಯ ಸಾಹಿತಿಯೊಬ್ಬರಿಗೆ ಮೊದಲಬಾರಿಗೆ ಪ್ರಶಸ್ತಿದೊರತ ಶ್ರೇಯಸ್ಸು ಅವರದ್ದು ಎಂದು ಘಟನೆಯೊಂದನ್ನು ನೆನಪಿಸಿಕೊಂಡರು. ವೇಣು ಅವರಿಗೆ ಬಹುತೇಕ ಎಲ್ಲ ಪ್ರಶಸ್ತಿಗಳು ಬಂದಿವೆ. ಕೆಂಧೂಳಿ ಪ್ರಶಸ್ತಿ ಅವರಿಗೇನು ದೊಡ್ಡದಲ್ಲ. ಆದರೆ ಕೆಂಧೂಳಿ ಮೌಲ್ಯ ಹೆಚ್ಚಿಸಲು ಈ ಪ್ರಶಸ್ತಿ ಪ್ರಮುಖವಾಗಿದೆ” ಎಂದು ಹೇಳಿದರು
ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ ಎಲ್ ವೇಣು ಅವರು, “ಪ್ರಶಸ್ತಿಗಳೆಲ್ಲವೂ ಒಂದೇ. ಯಾವುದೂ ದೊಡ್ಡದೂ ಅಲ್ಲ, ಯಾವುದೂ ಸಣ್ಣದಲ್ಲ. ಅದಕ್ಕೊಂದು ಗೌರವವಿದೆ. ಪ್ರಶಸ್ತಿ ಸ್ವೀಕರಿಸುವವರಿಗೆ ಜವಾಬ್ದಾರಿಯೂ ಹೆಚ್ಚಾಗುತ್ತದೆ. ನನಗೆ ಬಹುತೇಕ ಎಲ್ಲ ಪ್ರಶಸ್ತಿಗಳೂ ಬಂದಿವೆ. ಆದರೆ ಕೇಂದ್ರ ಆಕಾಡೆಮಿ ಪ್ರಶಸ್ತಿ ಮಾತ್ರ ಬಂದಿಲ್ಲ” ಎಂದು ಹಾಸ್ಯಚಟಾಕಿ ಹಾರಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಎಂ. ಎ. ಗಫೂರ್ ಅಧ್ಯಕ್ಷತೆಯಲ್ಲಿ ಕರಾವಳಿ ಅಭಿವೃದ್ದಿ ಮಂಡಳಿಯ ಪ್ರಥಮ ಸಭೆ
“ನನಗೆ ಗೊತ್ತಿರುವುದು ಬರವಣಿಗೆ. ನಾನು ಇರುವವರೆಗೂ ಬರೆಯುತ್ತೇನೆ. ಬರಹವೇ ನನ್ನ ಉಸಿರು ಹಾಗಾಗಿಯೇ ಉಸಿರಿರುವವರೆಗೂ ನಾನು ಬರೆಯುತ್ತಲೇ ಇರುತ್ತೇನೆ. ಕೆಂಧೂಳಿ ಪತ್ರಿಕೆ ನನ್ನ ಮೇಲಿನ ಗೌರವಕ್ಕೆ ಈ ಪ್ರಶಸ್ತಿಯನ್ನು ನೀಡಿದೆ, ಪತ್ರಿಕೆ ಮತ್ತಷ್ಟು ಬೆಳೆಯಲಿ” ಎಂದು ಹಾರೈಸಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ, ಕೆಂಧೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ, ಪತ್ರಕರ್ತ ಎಚ್ ಲಕ್ಷ್ಮಣ್, ಜಿ ಹರೀಶ್ ಬೇದ್ರೆ ಇದ್ದರು.





