ಪ್ರೀತಿ ಹೆಸರಿನಲ್ಲಿ ಅಪ್ರಾಪ್ತೆ ಹಿಂದೆ ಬಿದ್ದಿದ್ದ ದುರುಳರು ಲೈಂಗಿಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಆಕೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ, ಅಪಘಾತ ಸಂಭವಿಸಿದ್ದು, ಅಪ್ರಾಪ್ತೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಓರ್ವ ಬಾಲಾಪರಾಧಿ ಸೇರಿದಂತೆ ಮನೋಜ್, ಇರ್ಫಾನ್, ಮುಬಾರಕ್ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಪೋಕ್ಸೊ ಕಾಯಿದೆ ಮತ್ತು ಕಿಡ್ನ್ಯಾಪ್ ಪ್ರಕರಣದಡಿ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ಮನೋಜ್ ಎಂಬ ಯುವಕ 9ನೇ ತರಗತಿಯ ಬಾಲಕಿ ಹಿಂದೆ ಬಿದ್ದಿದ್ದನು. ಪದೇ ಪದೆ ಕರೆಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಅಕ್ಟೋಬರ್ 24ರಂದು ಮನೋಜ್ ಮತ್ತು ಸ್ನೇಹಿತರು 2 ಬೈಕ್‌ಗಳಲ್ಲಿ ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿ ಹೊಸಕೋಟೆ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಬಾಲಕಿ ಮತ್ತು ಮನೋಜ್ ಒಂದು ಬೈಕಿನಲ್ಲಿದ್ದರೆ, ಈತನ ಇಬ್ಬರು ಸ್ನೇಹಿತರು ಮತ್ತೊಂದು ಬೈಕ್‌ನಲ್ಲಿದ್ದರು. ಹೊಸಕೋಟೆ ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ ಹೊಸಕೋಟೆ ಪೊಲೀಸರು ಬಾಲಕಿ ಪೋಷಕರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆ ನಡೆಸಲು ಎಸ್‌ಐಟಿಗೆ ನಿರ್ದೇಶಿಸಿ: ಸಿಎಂಗೆ ಮಹಿಳಾ ಸಂಘಟನೆಗಳಿಂದ ಮನವಿ
“ಆರೋಪಿಗಳು ಬಲವಂತವಾಗಿ ನನ್ನ ಮಗಳನ್ನು ಕರೆದುಕೊಂಡು ಹೋಗಿ, ಲೈಂಗಿಕವಾಗಿ ಅವಳನ್ನು ಬಳಸಿಕೊಳ್ಳಲು ಯತ್ನಿಸಿದ್ದಾರೆ. ಅವಳನ್ನು ಅಪಹರಣ ಮಾಡುವಾಗ ಮಾರ್ಗಮಧ್ಯೆ ನಡೆದ ಅಪಘಾತದಲ್ಲಿ ಅವಳು ಮೃತಪಟ್ಟಿದ್ದಾಳೆ” ಎಂದು ಆರೋಪಿಸಿದ್ದಾರೆ.





