ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನವೆಂಬರ್ 15ರಂದು ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಬೆಂಗಳೂರು ನಗರ ಘಟಕ ವತಿಯಿಂದ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ತೀರ್ಥಹಳ್ಳಿ ತಿಳಿಸಿದ್ದಾರೆ.
ಬೆಂಗಳೂರಿನ ಬಿಫ್ಟ್ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯುವಕರಲ್ಲಿ ಉತ್ಸಾಹ, ಸಕಾರಾತ್ಮಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಚೇತನವನ್ನು ಕಲಾ ಮತ್ತು ಮನರಂಜನೆಯ ಮೂಲಕ ಉತ್ತೇಜಿಸುವುದಕ್ಕೆ ಈ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕಿರಾಅತ್, ಕುರ್‌ಆನ್ ಪಠಣ, ಪ್ರವಾದಿಯವರ ಪ್ರಶಂಸೆಯ ಹಾಡುಗಳು, ದೇವರ ಪ್ರಶಂಸೆಯ ಕೀರ್ತನೆಯ ಹಾಡುಗಳು, ಶಾಯರಿ ಸ್ಪರ್ಧೆ ನಡೆಯಲಿದೆ. ವಿಜೇತರಾಗುವವರಿಗೆ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಬೆಂಗಳೂರು ನಗರ ಘಟಕ ವತಿಯಿಂದ ಪ್ರಥಮ ಬಂದವರಿಗೆ 25 ಸಾವಿರ, ದ್ವಿತೀಯ 15 ಸಾವಿರ ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ನಗದು ಮತ್ತು 4 ಮತ್ತು 5ನೇ ಸ್ಥಾನ ಪಡೆದವರಿಗೆ 5 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿಯನ್ನು ನೀಡಲಾಗುವುದು. 14ರಿಂದ 40 ವರ್ಷ ವಯಸ್ಸಿನವರು ಇದರಲ್ಲಿ ಭಾಗವಹಿಸಬಹುದು” ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊದಲು ತಮ್ಮ ಹಾಡುಗಳನ್ನು ನವೆಂಬರ್ 9ರೊಳಗೆ ನಮಗೆ ತಮ್ಮ ಆಡಿಯೋಗಳನ್ನು ಕಳುಹಿಸಬೇಕು. ಉತ್ತಮ ಐದು ಹಾಡುಗಾರರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಲಿದೆ. ಆಯ್ಕೆಯಾದವರು ನವೆಂಬರ್ 14ರಂದು ನಡೆಯುವ ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಅಲ್ಲಿ ವಿಜೇತರ ಆಯ್ಕೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜೈಪುರದ ಪ್ರಸಿದ್ಧ ಗಾಯಕರಾದ ಡಾ. ಹೈದರ್ ಸೈಫ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು ತೀರ್ಪುಗಾರರಾಗಿ ಕೂಡ ಸಹಕರಿಸಲಿದ್ದಾರೆ ಎಂದು ಇಸ್ಮಾಯೀಲ್ ತೀರ್ಥಹಳ್ಳಿ ತಿಳಿಸಿದರು.
“ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ನೀಡಿರುವ ಬಾರ್ ಕೋಡ್ ಮೂಲಕ ನೋಂದಣಿ ಮಾಡಬೇಕು. ನವೆಂಬರ್ 9ರೊಳಗೆ ಆಡಿಯೋಗಳನ್ನು ಕಳುಹಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ 99809 06632 ಅಥವಾ 9986921165 ಮೊಬೈಲ್ ನಂಬರನ್ನು ಸಂಪರ್ಕಿಸಬಹುದು” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ರಾಜ್ಯಾಧ್ಯಕ್ಷರಾದ ಡಾ. ನಸೀಂ ಅಹ್ಮದ್, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಸುಹೈಲ್ ಅಹ್ಮದ್, ಸುಹೈಲ್ ಮಸೂಲ್ಧಾರ್, ಸಯೀದ್ ಬಾಗ್ಬಾನ್ ಉಪಸ್ಥಿತರಿದ್ದರು.





