ಬೆಂಗಳೂರು ನಗರದ ಶಾಸಕರ ಭವನದಲ್ಲಿ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ 2025ರ ಕುರಿತು ಸಮಾಲೋಚನಾ ಸಭೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025 ನಡೆಸಲು ಉದ್ದೇಶಿಸಿರುವ ಕುರಿತು ನಡೆದ ಸಭೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಹಾಗೂ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಸಂವಾದ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚಿಂತಕ ಶಿವಸುಂದರ್ ಅವರು ಬ್ರಿಟಿಷ್ ಸರ್ಕಾರ ಮತ್ತು ಅಂದಿನ ಮೈಸೂರು ರಾಜ್ಯ ಸಂದರ್ಭದಲ್ಲಿನ ಜಾತಿ ಜನಗಣತಿ ಹಾಗೂ ಮೀಸಲಾತಿ ಸೂತ್ರದ ಬಗ್ಗೆ ವಿವರಿಸಿದ್ದರು. ಮೀಸಲಾತಿಯ ಕಲ್ಪನೆ ಮತ್ತು ಮಂಡಲ್ ಆಯೋಗದ ಆಯಶಗಳ ಕುರಿತು ಮಾತನಾಡಿ, ಆಯಾ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಈ ಸಮೀಕ್ಷೆ ಯಾವ ಬಗೆಯಲ್ಲಿ ಪ್ರಗತಿಗೆ ಪೂರಕವಾಗಲಿದೆ ಎಂಬುದರ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಬಿಹಾರ ಮತ್ತು ತೆಲಂಗಾಣದಲ್ಲಿ ಈಗಾಗಲೇ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅದರ ಆಧಾರದಲ್ಲಿ ಆಯಾ ಜನಸಮುದಾಯಗಳಿಗೆ ಸರ್ಕಾರಿ ಯೋಜನೆ ತಲುಪಿಸುವ ಹಂತದಲ್ಲಿ ಎರಡೂ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ.
ಈ ಹಿಂದೆ ಇದೇ ರೀತಿಯ ಪ್ರಯತ್ನವೂ 2015ರಲ್ಲಿ ಕಾಂತರಾಜು ಆಯೋಗದಿಂದ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಲ್ಲಿ ಆದ ವಿಳಂಬದಿಂದಾಗಿ ಆ ಸಮೀಕ್ಷೆಯನ್ನು ಪರಿಗಣಿಸಲಾಗಿಲ್ಲ.
ಇದೀಗ ಮತ್ತೆ ಕರ್ನಾಟಕ ಸರ್ಕಾರವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ 2025ಅನ್ನು ನಡೆಸಲು ಸಿದ್ಧತೆ ನಡೆಸಿಕೊಂಡಿದ್ದು, ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಗಳನ್ನು ಈ ಮೂಲಕ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಸಾಮಾಜಿಕ ನ್ಯಾಯದ ಬಗ್ಗೆ ಕರ್ನಾಟಕಕ್ಕೆ ಒಂದು ಒಳ್ಳೆಯ ಇತಿಹಾಸವಿದ್ದು, ಇದೀಗ ಸಾಮಾಜಿಕ ನ್ಯಾಯದ ಬೇಡಿಕೆಯನ್ನು ಈ ಸಮೀಕ್ಷೆಯ ಮೂಲಕ ಸಾಕಾರಗೊಳಿಸಬೇಕಾಗಿದೆ. ಆ ಮೂಲಕ ನಾಡಿನ ಎಲ್ಲ ಜನ ಸಮುದಾಯಗಳಿಗೆ ಸಂವಿಧಾನಬದ್ಧ ಮೀಸಲಾತಿ ಮತ್ತು ಪ್ರಾತಿನಿಧ್ಯವನ್ನು ಖಚಿತಪಡಿಸಬೇಕಾಗಿದೆ.
ಆಯಾ ಜನಸಮುದಾಯಗಳ ಹಿಂದುಳಿಯುವಿಕೆಯ ಮಾನದಂಡಗಳಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಸಮೀಕ್ಷೆಯ ಮೂಲಕ ಗುರುತಿಸಿ, ಇದರ ಆಧಾರದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನ ಸಮುದಾಯಗಳನ್ನು ಸಬಲೀಕರಣಗೊಳಿಸಲು ಈ ಸಮೀಕ್ಷೆಯು ಬಹಳ ಪ್ರಮುಖ ಪಾತ್ರ ವಹಿಸಲಿದೆ ಎಂಬ ಅಂಶದ ಬಗ್ಗೆ ಚರ್ಚೆಯಲ್ಲಿ ಅಭಿಪ್ರಾಯಪಡಲಾಯಿತು.
ಈ ಒಂದು ಸಮಾಲೋಚನಾ ಸಭೆಗೆ ಮುಸ್ಲಿಂ ಸಮುದಾಯದ ಜಮಾಅತೆ ಉಲೇಮಾ ಹಿಂದ್ ಇದರ ರಾಜ್ಯಾಧ್ಯಕ್ಷರು ಮತ್ತು ಮುಸ್ಲಿಂ ಮುತ್ತಹಿದಾ ಮಹಾಜ್ ನ ಪ್ರತಿನಿಧಿಗಳು ಹಾಗೂ ನಿವೃತ್ತ ನ್ಯಾಯಾಧೀಶರು, ಐಎಎಸ್ ಅಧಿಕಾರಿಗಳು ಮತ್ತು ಸಮುದಾಯದ ವಿವಿಧ ಪಂಗಡಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಸ್ವಾತಂತ್ರ್ಯೋತ್ಸವಕ್ಕೆ ರಾಜಧಾನಿಗೆ ವಿಶೇಷ ರೈಲು ಓಡಾಟ
ಈ ಸಮಾಲೋಚನಾ ಸಭೆಯಲ್ಲಿ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಕರ್ನಾಟಕ ಇದರ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ತೀರ್ಥಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಯಾಸೀನ್ ಕೋಡಿಬೆಂಗ್ರೆ ಸಭೆಯನ್ನು ನಡೆಸಿಕೊಟ್ಟರು. ರಾಜ್ಯಾಧ್ಯಕ್ಷ ಡಾ. ನಸೀಮ್ ಅಹ್ಮದ್ ಕೊನೆಯಲ್ಲಿ ಧನ್ಯವಾದವಿತ್ತು ಮುಂದಿನ ರೂಪುರೇಷೆ ಮಂಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಇಬ್ರಾಹೀಮ್ ಅಡೂರ್, ಎನ್ ಟಿ ಅಬ್ರೂ, ಸಿ ಎಮ್ ಫೈಝ್, ಎಮ್ ಎ ಸಿರಾಜ್, ಮುಜಿಬುಲ್ಲಾ ಝಫರಿ, ಝುಬೇದಾ ಬೇಗಮ್, ಅಬ್ದುಸ್ಸಲಾಮ್ ಪುತ್ತಿಗೆ, ಸಯ್ಯದ್ ಇಕ್ಬಾಲ್, ಕೆಪಿಸಿಸಿ ಸದಸ್ಯರಾದ ಮುಸ್ತಫಾ ಹುಸೇನ್, ದಾದಾ ಪೀರ್, ಮುಹಮ್ಮದ್ ಪೀರ್ ಲಟಗೇರಿ, ಅಫ್ವಾನ್ ಹೂಡೆ ಸೇರಿದಂತೆ ಹಲವಾರು ಮಂದಿ ಇದ್ದರು.





