ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಮುಂದುವರಿಯುತ್ತಿದ್ದು, ಸಮೀಕ್ಷೆ ಪ್ರಾರಂಭವಾದಾಗಿನಿಂದ ಇಲ್ಲಿವರೆಗೆ 16,41,366 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ಅಕ್ಟೋಬರ್ 16ರಂದು ಒಂದೇ ದಿನದಲ್ಲಿ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾತ್ರಿ 8.30 ಗಂಟೆಯವರೆಗೆ 96,979 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಜಿಬಿಎ ವ್ಯಾಪ್ತಿಯ ಕೇಂದ್ರ, ಪೂರ್ವ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ಎಂಬ ಐದು ನಗರ ಪಾಲಿಕೆಗಳಲ್ಲಿಯೇ ಈ ಸಮೀಕ್ಷೆ ನಡೆಯುತ್ತಿದ್ದು, ಮೀಸಲು, ಶಿಕ್ಷಣ, ಸಾಮಾಜಿಕ ಸ್ಥಿತಿ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸುವ ಈ ಸಮೀಕ್ಷೆ ಸರ್ಕಾರದ ಭವಿಷ್ಯದ ಯೋಜನೆಗಳ ತಯಾರಿಕೆಗೆ ಆಧಾರವಾಗಲಿದೆ ಎಂದು ತಿಳಿಸಲಾಗಿದೆ.
ಈವರೆಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2 ಲಕ್ಷಕ್ಕೂ ಹೆಚ್ಚು, ಪೂರ್ವ ಪಾಲಿಕೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು, ಉತ್ತರದಲ್ಲಿ 3.9 ಲಕ್ಷ, ದಕ್ಷಿಣದಲ್ಲಿ 3 ಲಕ್ಷದಷ್ಟು ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 4.6 ಲಕ್ಷಕ್ಕೂ ಹೆಚ್ಚು ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ಇದನ್ನೂ ಓದಿ: ಬೆಂಗಳೂರು | ಆದ್ಯತೆ ಮೇಲೆ ರಸ್ತೆ ಕಾಮಗಾರಿ ಕೈಗೊಳ್ಳಿ: ರಾಜೇಂದ್ರ ಚೋಳನ್
ಸಮೀಕ್ಷಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುವಾಗ ನಾಗರಿಕರು ಸಹಕಾರ ನೀಡುವಂತೆ ಜಿಬಿಎ ಮನವಿ ಮಾಡಿದ್ದು, ಬಯಸುವವರು ಸ್ವಯಂ ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದೆ. ಇದಕ್ಕಾಗಿ https://kscbcselfdeclaration.karnataka.gov.in/ ಈ ವೆಬ್‌ಸೈಟ್ ಮೂಲಕ ಸ್ವಯಂ ಘೋಷಣೆಯನ್ನು ಸಲ್ಲಿಸುವ ವ್ಯವಸ್ಥೆಯನ್ನು ಒದಗಿಸಲಾಗಿದೆ.





