ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಹದಿಮೂರು ಗ್ರಾಮಗಳ ಸುಮಾರು 1777 ಎಕರೆ ಪೂರ್ಣ ಭೂ ಸ್ವಾಧೀನದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ನಾಳೆ ಹಮ್ಮಿಕೊಂಡಿರುವ ದೇವನಹಳ್ಳಿ ಚಲೋ ವನ್ನು ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
13 ಹಳ್ಳಿಗಳ ಪೈಕಿ 3 ಹಳ್ಳಿಯ ಐದುನೂರು ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರು ಇಂದು ಹೇಳಿಕೆ ನೀಡಿದ್ದಾರೆ. ಇಂತಹ ಒಡೆದಾಳುವ ಕುಟಿಲ ಕುತಂತ್ರವನ್ನು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಸಂಪೂರ್ಣವಾಗಿ ತಿರಸ್ಕರಿಸಿದೆ. ನಾಳೆ ದೇವನ ಹಳ್ಳಿ ಚಲೋ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.
ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನವು ಕರಾಳ ಕೆಎಐಡಿಬಿ ಭೂ ಸ್ವಾಧೀನ ಪ್ರಕಾರ ನಡೆಸಲಾಗುತ್ತಿದೆ. ಇಂತಹ ಅನ್ಯಾಯದ ಭೂ ಸ್ವಾಧೀನವು, ಭೂ ಸ್ವಾಧೀನ ಕಾಯ್ದೆ 2013 ರ ಕಾಯ್ದೆಗೆ ವಿರುದ್ದವಾಗಿದೆ. ಕರಾಳ ಕೆಎಐಡಿಬಿ ಭೂ ಸ್ವಾಧೀನ ಕಾಯ್ದೆ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರ ರೈತರ ವಿರೋಧ ಧಿಕ್ಕರಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದನ್ನು ವಿರೋಧಿಸಿ ರೈತರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಅನಿರ್ದಿಷ್ಟವಾಧಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹಿಂದೆ ವಿರೋಧ ಪಕ್ಷದ ನಾಯಕರಾಗಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತಾನು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಪ್ರಕಟಣೆ ರದ್ದುಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಭೂ ಸ್ವಾಧೀನ ಕ್ಕೆ ಹಠ ಮಾರಿ ಧೋರಣೆ ಅನುಸರಿಸುತ್ತಾ ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದೆ. ಈ ಕುಟಿಲ ತಂತ್ರದಿಂದ ರೈತ ಹೋರಾಟ ಬಗ್ಗು ಬಡಿಯಲು ಸಾಧ್ಯವಿಲ್ಲ ಎಂದು ಸಮಿತಿ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಇರಾಕ್ – ಈಗ ಇರಾನ್: ಅಮೆರಿಕ ಕ್ರೌರ್ಯಕ್ಕೆ ಕೊನೆ ಎಂದು?
ನಾಳೆ ದೇವನಹಳ್ಳಿ ತಹಶಿಲ್ದಾರ್ ಕಛೇರಿ ಎದುರು ನಡೆಯುತ್ತಿರುವ ಭೂ ಸ್ವಾಧೀನ ವಿರೋಧಿ ಹೋರಾಟ ಕ್ಕೆ ಎಲ್ಲ ಭೂ ಸ್ವಾಧೀನ ವಿರೋಧಿ ಹೋರಾಟಗಾರರು, ರೈತರು, ಕಾರ್ಮಿಕರು ವಿದ್ಯಾರ್ಥಿ ಯುವಜನ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯು ಮತ್ತೊಮ್ಮೆ ಮನವಿ ಮಾಡಿದೆ.
ಶೇಕಡಾ 90ಕ್ಕಿಂತ ಹೆಚ್ಚು ರೈತರು ವಿರೋಧ ದಾಖಲಿಸಿರುವ ಈ ಅನ್ಯಾಯದ ಭೂ ಸ್ವಾಧೀನ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿಗಳು ತಮ್ಮ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸುತ್ತದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕರಾದ ಬಡಗಲಪುರ ನಾಗೇಂದ್ರ, ಟಿ ಯಶವಂತ, ನೂರ್ ಶ್ರೀಧರ್, ಚನ್ನರಾಯಪಟ್ಟಣ ಭೂ ಸ್ವಾಧೀನ ಹೋರಾಟ ಸಮಿತಿ ಸಂಚಾಲಕರಾದ ಕಾರಹಳ್ಳಿ ಶ್ರೀನಿವಾಸ್, ಚಂದ್ರ ತೇಜಸ್ವಿ, ನಂಜಪ್ಪ, ಪ್ರಭಾ ಎನ್ ಬೆಳವಂಗಲ, ರಮೇಶ್ ಚೀಮಾಚನಹಳ್ಳಿ, ರಘು ನಾಯಕನಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.





