ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಒಂದೇ ಕಾಮಗಾರಿಗೆ ಎರಡನೇ ಬಾರಿ ಗುದ್ದಲಿ ಪೂಜೆ ನೆರವೇರಿಸಿದ ಹಿನ್ನೆಲೆ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಶಾಸಕ ಧೀರಜ್ ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ದೀರಜ್, “ಒಂದೇ ಕಾಮಗಾರಿಗೆ ಎರಡೆರಡು ಬಾರಿ ಗುದ್ದಲಿ ಪೂಜೆ ಮಾಡುವುದರಿಂದ ಸರ್ಕಾರದ ಕಾರ್ಯವೈಖರಿ ಸ್ಪಷ್ಟವಾಗುತ್ತದೆ. ಇದು ಜನರನ್ನು ಮರುಳು ಮಾಡುವ ನಾಟಕ” ಎಂದು ಕಿಡಿಕಾರಿದರು. “ಈ ಹಿಂದೆ ಎರಡು ವರ್ಷದ ಸಾಧನಾ ಸಮಾವೇಶ ಎಂಬ ಹೆಸರಿನಲ್ಲಿ ಮುಖ್ಯಮಂತ್ರಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಆದರೆ ಆ ಎರಡು ವರ್ಷಗಳಲ್ಲಿ ಯಾವ ಸಾಧನೆ ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಜನರಿಗೆ ಹೇಳಬೇಕು ಎಂದು ಸವಾಲು ಹಾಕಿದರು.
“ಎರಡು ವರ್ಷಗಳಲ್ಲಿ ದೊಡ್ಡಬಳ್ಳಾಪುರಕ್ಕೆ ಏನು ಕೊಟ್ಟಿದ್ದೀರಿ? ಯಾವ ಅಭಿವೃದ್ಧಿ ಕೆಲಸಗಳು ನಡೆದಿವೆ?” ಎಂದು ಪ್ರಶ್ನಿಸಿದರು.
ಇದನ್ನು ಓದಿ: ದೊಡ್ಡಬಳ್ಳಾಪುರ | ಸೂರತ್ ಸೀರೆಗಳ ನಿಷೇಧ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಂದ್; ನೀರಸ ಪ್ರತಿಕ್ರಿಯೆ
ಆದರೆ ಇದೇ ಪ್ರಶ್ನೆಯನ್ನು ಸಚಿವರ ಮುಂದೆ ಕೇಳುವ ಸಂದರ್ಭ ಬಂದಾಗ, ಶಾಸಕ ಧೀರಜ್ ಅವರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿತು. ಸಚಿವರ ಮುಂದೆ ಪ್ರಶ್ನೆ ಕೇಳುತ್ತಿದ್ದಂತೆ ‘ಸಾಫ್ಟ್ ಕಾರ್ನರ್’ ತೋರಿದಂತೆ ಮಾತನಾಡಿದ ಅವರು, ತಾವು ಹೇಳಿದ ಮಾತುಗಳನ್ನು ತಿರುಚಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. “ನಾನು ಜವಳಿ ಇಲಾಖೆಗೆ ಅನುದಾನ ಬಂದಿಲ್ಲ ಎಂದಷ್ಟೇ ಹೇಳಿದ್ದೇನೆ. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ” ಎಂದು ಹೇಳಿದರು.
ಒಂದೇ ವೇದಿಕೆಯಲ್ಲಿ ಪರಸ್ಪರ ವಿರೋಧಿ ಹೇಳಿಕೆಗಳನ್ನು ನೀಡಿದ ಶಾಸಕ ದೀರಜ್ ಅವರ ನಡೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.





