“ಬೆಂಗಳೂರನ್ನು ಹಸಿರುಮಯ ನಗರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಉತ್ತಮ ಯೋಜನೆಯನ್ನು ರೂಪಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಅರಣ್ಯ ವಿಭಾಗದ ವಿಶೇಷ ಆಯುಕ್ತರು ಹಾಗೂ ಹಸಿರು ಬೆಂಗಳೂರಿನ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ‘ಹಸಿರು/ಪರಿಸರ ಬೆಂಗಳೂರು’ ವಿಷಯಕ್ಕೆ ಸಂಬಂಧಿಸಿದಂತೆ ಆರ್.ವಿ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ವಿಚಾರ ಸಂಕಿರಣ ನಡೆಯಿತು.
ಈ ವೇಳೆ ಮಾತನಾಡಿದ ಅವರು, “ಬೆಂಗಳೂರನ್ನು ಹಸಿರು ನಗರವನ್ನಾಗಿಸುವ ಉದ್ದೇಶದಿಂದ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 7 ವಿವಿಧ ವಿಷಯಗಳಡಿ ಬರುವ ಹಸಿರು ಬೆಂಗಳೂರನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅದರಂತೆ ಮುಂದಿನ 25-30 ವರ್ಷಗಳಲ್ಲಿ ಸಂಪೂರ್ಣ ಬೆಂಗಳೂರನ್ನು ಹಸಿರುಮಯವಾಗಿಸಬೇಕು. ಈ ಸಂಬಂಧ ನಾಗರಿಕರಿಂದ ಬಂದಂತಹ ಸಲಹೆಗಳನ್ನು ಅಧ್ಯಯನ ನಡೆಸಿ ಕ್ರೋಡೀಕರಿಸಿ ಉತ್ತಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ನಗರದಲ್ಲಿ ಈಗಾಗಲೇ ಶಾಲಾ-ಕಾಲೇಜು ಶೈಕ್ಷಣಿಕ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು, ಸಸಿಗಳನ್ನು ನೆಟ್ಟು ಅವು ಬೆಳೆಯುವವರೆಗೆ ಪೋಷಣೆ ಮಾಡಲು ವಿದ್ಯಾರ್ಥಿಗಳಿಗೆ ಜವಾಬ್ದಾರಿಯನ್ನು ನೀಡಲಾಗುವುದು. ಆ ಸಸಿಗೆ ವಿದ್ಯಾರ್ಥಿಗಳ ಹೆಸರನ್ನು ಶಾಶ್ವತವಾಗಿ ಇಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಸಂಚಾರಯುಕ್ತ ಬೆಂಗಳೂರಿಗೆ ನಾಗರಿಕರಿಂದ 10,479 ಸಲಹೆ
ಹಸಿರು ಬೆಂಗಳೂರು ವಿಷಯವಾಗಿ ವಿಚಾರ ಸಂಕಿರಣದಲ್ಲಿ ಬಂದಂತಹ ಸಲಹೆಗಳು
• ನಗರದ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಸಸಿ ನೆಡುವುದು.
• ಕೆರೆಗಳಿಗೆ ಕಲುಷಿತ ನೀರು ಸೇರದಂತೆ ಕ್ರಮವಹಿಸುವುದು.
• ಶೇ. 100ರಷ್ಟು ತ್ಯಾಜ್ಯ ನೀರು ಶುದ್ಧೀಕರಣ ಹಾಗೂ ಶುದ್ಧೀಕರಣ ಘಟಕ ವಿಕೇಂದ್ರಿಕರಿಸುವುದು.
• ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು.
• ಅಪಾರ್ಟ್‌ಮೆಂಟ್‌ಗಳಿಗೆ ಕಡ್ಡಾಯವಾಗಿ ಎಸ್.ಟಿ.ಪಿ ನಿರ್ಮಾಣ ಮಾಡುವುದು.
• ಆರ್ಕಿಟೆಕ್ಟ್‌ಗಳಿಗೆ ಮರ/ಸಸಿಗಳನ್ನು ಕಡಿಯದೆ ಅವನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಸಸಿಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿನ್ಯಾಸ ರೂಪಿಸುವುದು.
• ನಗರದಲ್ಲಿ ನೆಡುವಂತಹ ಸಸಿಗಳು ಉಳಿದಿವೆಯೇ ಅಥವಾ ನಾಶವಾಗಿವೆಯೆ ಎಂಬುದರ ಬಗ್ಗೆ ನಿಖರ ಮಾಹಿತಿಯ ಇಟ್ಟುಕೊಳ್ಳುವುದು.
• ನಗರದಲ್ಲಿರುವ ಎಲ್ಲ ಕೆರೆಗಳ ಪುನಶ್ಚೇತನ ಹಾಗೂ ನಿರ್ವಹಣೆ ಮಾಡುವುದು.
• ಅಂತರ್ಜಲ ಪುನಶ್ಚೇತನ ಮಾಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು.
• ಪರಿಸರವನ್ನು ಉಳಿಸುವ ಬಗ್ಗೆ ನಾವೆಲ್ಲರೂ ಮಕ್ಕಳಿಗೆ ಮನೆಯಿಂದಲೇ ಪರಿಸರ ಉಳಿಸುವ ಬಗ್ಗೆ ಶಿಕ್ಷಣ ನೀಡಿ ಸಸಿಗಳನ್ನು ಪೋಷಿಸಿ ಬೆಳೆಸುವ ಕುರಿತು ಜಾಗೃತಿ ಮೂಡಿಸಬೇಕು.
• ಬಿಬಿಎಂಪಿ, ಜಲಮಂಡಳಿ, ಬಿಡಿಎ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಪರಿಸರವನ್ನು ವೃದ್ಧಿಸಬೇಕು.
• ನಗರದಲ್ಲಿ ವಾಹನಗಳಿಂದ ಸಾಕಷ್ಟು ವಾಯು ಮಾಲಿನ್ಯವಾಗಲಿದ್ದು, ಹೊಸ ವಾಹನಗಳನ್ನು ಕೊಳ್ಳುವ ಸಮಯದಲ್ಲಿ ಸಸಿಗಳನ್ನು ಉಡುಗೊರೆಯಾಗಿ ನೀಡಿ ಅವುಗಳನ್ನು ಪೋಷಿಸಿ ಬೆಳೆಸಲು ಜಾಗೃತಿ ಮೂಡಿಸುವುದು.
• ಅಭಿವೃದ್ಧಿಯಾಗದಂತಹ ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಯೋಜನೆ ರೂಪಿಸುವುದು.
• ನಗರದ ರಸ್ತೆ ಬದಿ, ಉದ್ಯಾನ, ಮನೆಗಳ ಬಳಿ ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು.
ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಸರೀನಾ ಸಿಕ್ಕಲಿಗರ್, ಕೆರೆಗಳ ವಿಭಾಗದ ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




