ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇ.50ರಷ್ಟು ರಿಯಾಯಿತಿ ದಂಡ ಪಾವತಿ ಸೆಪ್ಟೆಂಬರ್ 9 ಕೊನೆಯಾಗಿದ್ದು, ಒಂದೇ ದಿನದಲ್ಲಿ ವಾಹನ ಸವಾರರು ಒಂದು ಕೋಟಿ ರೂ.ಗೂ ಅಧಿಕ ದಂಡ ಕಟ್ಟಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ನಿನ್ನೆಯವರೆಗೆ 9 ಕೋಟಿ ರೂಪಾಯಿಗೂ ಅಧಿಕ ದಂಡ ಸಂಗ್ರಹವಾಗಿದೆ.
ಸಂಚಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, “ಶುಕ್ರವಾರದವರೆಗೆ 8 ಕೋಟಿ ರೂ.ವರೆಗೆ ದಂಡ ಸಂಗ್ರಹವಾಗಿತ್ತು. ರಿಯಾಯಿತಿ ದಂಡ ಪಾವತಿಸಲು ಶನಿವಾರವೇ ಕೊನೆಯ ದಿನ. ಫೆಬ್ರವರಿ 11ಕ್ಕೂ ಮುನ್ನ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಿಗೆ ಶೇ.50ರಷ್ಟು ದಂಡ ಕಟ್ಟುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದರು. ರಿಯಾಯಿತಿ ದಂಡ ಪಾವತಿಗೆ ಗಡುವು ಮುಕ್ತಾಯವಾಗುವ 24 ಗಂಟೆ ಅಂತರದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ದಂಡದ ಮೊತ್ತ ಪಾವತಿಸಿದ್ದಾರೆ. ಈ ಮೂಲಕ ಜುಲೈ 6 ರಿಂದ ಸೆ.9ರವರೆಗೆ ಈವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ 9.24 ಕೋಟಿ ರೂ.ಗೂ ಅಧಿಕ ದಂಡ ಪಾವತಿಯಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೇಸ್ಟ್ ರೂಪದಲ್ಲಿ ಅಕ್ರಮ ಚಿನ್ನ ಸಾಗಾಟ; ಇಬ್ಬರ ಬಂಧನ
“ಜುಲೈ ತಿಂಗಳಲ್ಲಿ 1,23,178 ಲಕ್ಷ ಕೇಸ್ಗಳಿಂದ 3.89 ಕೋಟಿ ರೂ. ಸಂಗ್ರಹವಾಗಿದೆ. ಆಗಸ್ಟ್ನಲ್ಲಿ 86,587 ಪ್ರಕರಣಗಳಿಂದ 2.82 ಕೋಟಿ ರೂ. ಸಂಗ್ರಹವಾಗಿದ್ದು, ಸೆ.9ಕ್ಕೆ ಕೊನೆಗೊಂಡಂತೆ 83 ಸಾವಿರ ಪ್ರಕರಣಗಳಿಂದ 2.82 ಕೋಟಿ ರೂ. ಸೇರಿದಂತೆ ಒಟ್ಟು 9 ಕೋಟಿ ರೂಪಾಯಿಗೂ ಅಧಿಕ ದಂಡ ವಸೂಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.





