“ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿನ ಬೇಗೂರಿನಲ್ಲಿ ದಲಿತರ ಮನೆ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿ ಹತ್ತು ತಿಂಗಳು ಕಳೆಯುತ್ತ ಬಂದರೂ ತನಿಖೆ ಸರಿಯಾಗಿ ನಡೆದಿಲ್ಲ ಮತ್ತು ಅಂದಿನ ತನಿಖಾ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ. ಅವರ ಮೇಲೂ ತನಿಖೆ ಆಗಬೇಕು” ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಮುಖ್ಯಸ್ಥರಾದ ಆದರ್ಶ್ ಅಯ್ಯರ್ ಆಗ್ರಹ ಮಾಡಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೇಗೂರಿನಲ್ಲಿ ದಲಿತ ಕುಟುಂಬಕ್ಕೆ ಸೇರಿದ ಮನೆ ಮತ್ತು ದೇವಸ್ಥಾನವನ್ನು 29 ಮೇ 2025ರಂದು ರಾತ್ರೋರಾತ್ರಿ ಏಕಕಾಲಕ್ಕೆ ನೂರಾರು ಗೂಂಡಾಗಳು ನುಗ್ಗಿ, ಪೊಲೀಸರ ಎದುರಲ್ಲೇ ಧ್ವಂಸ ಮಾಡಿರುವ ಘಟನೆ ನಡೆದಿತ್ತು. ಆ ಘಟನೆಗೆ ಸಂಬಂಧಪಟ್ಟಂತೆ ಇಂದಿಗೂ ಸರಿಯಾಗಿ ತನಿಖೆ ನಡೆದಿಲ್ಲ” ಎಂದು ಆರೋಪ ಮಾಡಿದರು.
“ಈಗಾಗಲೇ ಆ ಜಾಗದಲ್ಲಿ ಪ್ರೆಸ್ಟೇಜ್ ಸದರನ್ ಸ್ಟಾರ್ ಎಂಬ ಅಪಾರ್ಟ್‌ಮೆಂಟ್ ನಿರ್ಮಾಣವಾಗುತ್ತಿದೆ. ಮೂಲತಃ ಆ ಜಾಗ ಮುನಿಸ್ವಾಮಿ ಅವರ ಕುಟುಂಬಕ್ಕೆ ಸೇರಿದ್ದು. ಕೇಳಲು ಹೋದರೆ ಬೆದರಿಕೆ ಹಾಕುತ್ತಾರೆ. ನಮ್ಮ ಹಿಂದೆ ಡಿ.ಕೆ.ಶಿವಕುಮಾರ್ ಅವರ ಬೆಂಬಲವಿದೆ ಎನ್ನುತ್ತಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ : ನೂರಾರು ಗೂಂಡಾಗಳಿಂದ ರಾತ್ರೋರಾತ್ರಿ ದಲಿತರ ಮನೆ-ದೇವಸ್ಥಾನ ಧ್ವಂಸ, ಪ್ರೆಸ್ಟೀಜ್ ಕಂಪನಿ ಮೇಲೆ ಕೃತ್ಯದ ಆರೋಪ
“ಸಾರಾ ಫಾತಿಮಾ (ಸೌತ್ ಈಸ್ಟ್ ಡಿಸಿಪಿ), ಬೇಗೂರು ಠಾಣಾ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್, ಎಲೆಕ್ಟ್ರಾನಿಕ್ ಸಿಟಿ ಠಾಣಾ ಎಸಿಪಿ ಸತೀಶ್ ಎಂಬುವರು ಘಟನೆಯಾದ ದಿನ ಕರ್ತವ್ಯ ಲೋಪ ಎಸಗಿದ್ದಾರೆ. ಇವರ ಮೇಲೆ ಸರ್ಕಾರ ಕೂಡಲೇ ತನಿಖೆಗೆ ಆದೇಶ ನೀಡಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ ಬಿ.ಆರ್.ಅಂಬೇಡ್ಕರ್ ದಂಡು ಮತ್ತು ಜನಾಧಿಕಾರ ಸಂಘರ್ಷ ಪರಿಷತ್‌ನ ಪ್ರಕಾಶ್ ಬಾಬು ಹಾಗೂ ಮನೆ ಕಳೆದುಕೊಂಡ ಮುನಿಸ್ವಾಮಿ ಮತ್ತು ಕುಟುಂಬದವರು ಇದ್ದರು.
ಘಟನೆಯ ಹಿನ್ನೆಲೆ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿನ ಬೇಗೂರಲ್ಲಿ ನೂರಾರು ಗೂಂಡಾಗಳು 29 ಮೇ 2025 ರಂದು ರಾತ್ರೋರಾತ್ರಿ ಏಕಕಾಲಕ್ಕೆ ನುಗ್ಗಿ, ದಲಿತರ ಮನೆ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿರುವ ಘಟನೆ ನಡೆದಿತ್ತು.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಮಾರು ಒಂದು ಎಕರೆ ಜಮೀನಿನಲ್ಲಿ ಮುನಿಸ್ವಾಮಿ ಎಂಬುವರು 1970ರಿಂದಲೂ ಜಮೀನನ್ನು ಉಳುಮೆ ಮಾಡಿಕೊಂಡು, ಅದೇ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು ಎನ್ನುವ ಮಾಹಿತಿ ಇದೆ.
ಜಮೀನಿನ ಮುಂಭಾಗದಲ್ಲಿರುವ ಪ್ರೆಸ್ಟೀಜ್ ಕಂಪನಿ ಈ ಭೂಮಿಯನ್ನು ತನ್ನ ವಶಕ್ಕೆ ಪಡೆಯಲು ಸಾಕಷ್ಟು ಸಲ ಪ್ರಯತ್ನಿಸಿದ್ದು ಎನ್ನುವ ಆರೋಪವನ್ನು ಮುನಿಸ್ವಾಮಿ ಅವರ ಕುಟುಂಬ ಸದಸ್ಯರು ಮಾಡಿದ್ದರು.





