ಬಿ.ಎಲ್. ಇಂಜಿನಿಯರಿಂಗ್ ವರ್ಕ್ಸ್ ಮತ್ತು ಅದರ ಮಾಲೀಕರಾದ ಬಿ.ಎಲ್.ವೇಣು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಗರದ ನೀಲಸಂದ್ರದಲ್ಲಿ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿ, ಉಸಿರುಗಟ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನೀಲಸಂದ್ರ ಬಝಾರ್ ಸ್ಟ್ರೀಟ್‌ನಲ್ಲಿ ಅಕ್ಟೋಬರ್ 31ರ ಬೆಳಿಗ್ಗೆ 11.20 ಸಮಯದಲ್ಲಿ ಘಟನೆ ನಡೆದಿತ್ತು. ಇಬ್ಬರು ಕಾರ್ಮಿಕರನ್ನು ಮಲದ ಗುಂಡಿಯಿಂದ ಹೊರಗೆ ತೆಗೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿತ್ತು. ಕಾನೂನಿನ ಪ್ರಕಾರ ಮ್ಯಾನ್ ಹೋಲ್‌ಗೆ ಇಳಿಸುವುದು ಅಪರಾಧವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಆಗಿರುವ ಸೈಯದ್ ಮುಯೀಝ್ ಅಹಮ್ಮದ್ ಅವರು ನೀಡಿದ ದೂರಿನ ಅನ್ವಯ, ಬಿ.ಎಲ್. ಇಂಜಿನಿಯರಿಂಗ್ ವರ್ಕ್ಸ್ ಕಂಪನಿ ಮತ್ತು ಸಂಸ್ಥೆಯ ಮಾಲೀಕ ಬಿ.ಎಲ್. ವೇಣು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿರಿ: ಕಲಬುರಗಿ | ʼಜೈ ಶ್ರೀರಾಮʼ ಘೋಷಣೆ ಕೂಗಿ ಕಾರಿಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು : ಆರೋಪ
ದೂರಿನಲ್ಲಿ ಏನಿದೆ?
“ಬಿಡಬ್ಲ್ಯುಎಸ್‌ಎಸ್‌ಬಿ ವತಿಯಿಂದ ನೀಲಸಂದ್ರ ಬಝಾರ್ ಸ್ಟ್ರೀಟ್‌ನಲ್ಲಿ ಪೈಲ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಸದರಿ ಕಾಮಗಾರಿಯನ್ನು ಬಿ.ಎಲ್. ಇಂಜಿನಿಯರಿಂಗ್ ವರ್ಕ್ಸ್‌ನವರಿಗೆ ಗುತ್ತಿಗೆ ನೀಡಲಾಗಿದೆ. ಅಕ್ಟೋಬರ್ 31ರಂದು ಸದರಿ ಜಾಗದಲ್ಲಿ ಆರ್‌ಸಿಸಿ ಪೈಪ್‌ಲೈನ್‌ನಲ್ಲಿ ಚಾನಲ್ ಮಾಡುವ ಸಲುವಾಗಿ, ಪೈಪ್‌ಲೈನ್ ಹೊಡೆಯಲು ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಲಾಗಿದೆ. ಡ್ರಿಲಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಅಸ್ವಸ್ಥರಾಗಿರುವುದು ಗಮನಕ್ಕೆ ಬಂದಿದ್ದು, ತದನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಒಬ್ಬ ಕಾರ್ಮಿಕ ಸೆಂಟ್ ಫಿಲೋಮಿನಾಸ್ ಆಸ್ಪತ್ರೆಯಲ್ಲಿ, ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಬಿಎಲ್ ಇಂಜಿನಿಯರಿಂಗ್ ವರ್ಕ್ಸ್‌ನೊಂದಿಗೆ ಮಂಡಳಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಸದರಿ ಗುತ್ತಿಗೆದಾರ ಕಂಪನಿಯು ಕಾಮಗಾರಿ ನಡೆಯುವ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಪೈಪ್‌ಲೈನ್‌ನಲ್ಲಿ ಕಾಮಗಾರಿ ನಡೆಸುವ ಸಂದರ್ಭಗಳಲ್ಲಿ, ಕಾರ್ಮಿಕರು ರಕ್ಷಣಾತ್ಮಕ ಕವಚ ಮತ್ತು ಸುರಕ್ಷಾ ಸಾಧನಗಳನ್ನು ಬಳಸದೆ ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿರುವುದು ಕಂಡುಬಂದಿದೆ. ಆದ್ದರಿಂದ ಗುತ್ತಿಗೆದಾರ ಕಂಪನಿಯಾದ ಬಿ.ಎಲ್. ಇಂಜಿನಿಯರಿಂಗ್ ವರ್ಕ್ಸ್ ಮತ್ತು ಅದರ ಮಾಲೀಕರಾದ ಬಿ.ಎಲ್.ವೇಣು ಹಾಗೂ ಇದಕ್ಕೆ ಸಂಬಂಧಪಟ್ಟ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಎಇಇ ದೂರಿನಲ್ಲಿ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125, 3(5)ರ ಅಡಿ ಪ್ರಕರಣ ದಾಖಲಿಸಿದ್ದಾರೆ.





