ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಿಂದ ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 190ಕ್ಕೂ ಹೆಚ್ಚು ಏರಿಕೆಯಾಗಿದ್ದು, ಇದರಲ್ಲಿ 9 ಮಂದಿ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ನಗರದ ಕಣ್ಣಿನ ಆಸ್ಪತ್ರೆಗಳು ಈ ಆತಂಕಕಾರಿ ಸಂಖ್ಯೆಯನ್ನು ದಾಖಲಿಸುತ್ತಿದ್ದಂತೆ, ಇದರಲ್ಲಿ ಮಕ್ಕಳೇ ಹೆಚ್ಚಾಗಿ ತೊಂದೆರೆಗೀಡಾಗಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ಒಟ್ಟು 76 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ 36 ಮಕ್ಕಳು ಸೇರಿದ್ದಾರೆ. ಮಿಂಟೋ ನೇತ್ರಾಲಯದಲ್ಲಿ 60ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆದಿದ್ದು, ಸಂಕರಾ ಐ ಹಾಸ್ಪಿಟಲ್‌ನಲ್ಲಿ 18 ಪ್ರಕರಣಗಳಲ್ಲಿ 14 ಮಕ್ಕಳು ಗಾಯಗೊಂಡಿದ್ದಾರೆ. 144ಕ್ಕೂ ಹೆಚ್ಚು ಕಣ್ಣಿನ ಗಾಯಗಳು ದಾಖಲಾಗಿದ್ದು, 13 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ನಿಂತು ನೋಡುವವರು, ದಾರಿಹೋಕರ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ.
ಪಟಾಕಿ ಸಿಡಿಸುವಾಗ ರಕ್ಷಣಾತ್ಮಕ ಕನ್ನಡಕಗಳು ಕಡ್ಡಾಯವಾಗಿರಬೇಕು. ಸುರಕ್ಷಿತ ಅಂತರ (ಕನಿಷ್ಠ 10-15 ಅಡಿ) ಕಾಪಾಡಿಕೊಳ್ಳಿ. ಮಕ್ಕಳಿಗೆ ಪೋಷಕರು ನಿಗಾ ವಹಿಸಿ, ತೀವ್ರ ಶಬ್ದದ ಪಟಾಕಿಗಳ ಬದಲು ಬೆಳಕು ಪಟಾಕಿಗಳನ್ನು ಬಳಸಿ. ಮನೆಯಲ್ಲಿ ತಯಾರಿಸಿದ ಪಟಾಕಿಗಳು ಗುಣಮಟ್ಟರಹಿತವಾಗಿರುವುದರಿಂದ ಅನಿರೀಕ್ಷಿತ ಸ್ಫೋಟಕ್ಕೆ ಕಾರಣವಾಗುತ್ತವೆ – ಅಂತಹವುಗಳನ್ನು ತಪ್ಪಿಸಿ. ಕಣ್ಣಿನ ಸಮಸ್ಯೆ ಅಥವಾ ಅಲರ್ಜಿ ಇರುವವರು ಹೊಗೆಯಿಂದ ದೂರವಿರಿ. ಪರಿಸರ ಸ್ನೇಹಿ ಪಟಾಕಿಗಳನ್ನು ಆಯ್ಕೆ ಮಾಡಿಕೊಳ್ಳಿ.ಗಾಯವಾದ ಸಂದರ್ಭದಲ್ಲಿ ಕಣ್ಣನ್ನು ಉಜ್ಜಬೇಡಿ, ನೀರು ಸೇರಿಸಬೇಡಿ ಅಥವಾ ಕೈಹಿಡಿಯಬೇಡಿ. ತಕ್ಷಣ ಹತ್ತಿರದ ಕಣ್ಣು ತಜ್ಞರ ಬಳಿ ಧಾವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ |ಕಾರ್ಮಿಕರ ಹೊಟ್ಟೆ ಮೇಲೆ ಮತ್ತೆ ಮೋದಿ ಹೊಡೆತ – ಕಡುಕಠಿಣ ಪಿಎಫ್ ಹಿಂಪಡೆತ
ಪಟಾಕಿ ಹೊಗೆಯಿಂದ ಬೆಂಗಳೂರು ವಾಯು ಗುಣಮಟ್ಟ ಹದಗೆಟ್ಟಿದ್ದು, ಕಾಡುಬೀಸನಹಳ್ಳಿಯಲ್ಲಿ AQI 140 (ಹಾನಿಕಾರಕ), ಮೆಜೆಸ್ಟಿಕ್ 116, BTM ಲೇಔಟ್ 90 ದಾಖಲಾಗಿದೆ. ಬಾಪೂಜಿ ನಗರ 88, ಜಯನಗರ 80 ಆಗಿದ್ದು, ಹೆಬ್ಬಾಳಲ್ಲಿ 79 ದಾಖಲಾಗಿದೆ. ಉಸಿರಾಟ ಸಮಸ್ಯೆ ಇರುವವರು ಮನೆಯಲ್ಲಿ ಉಳಿಯಿರಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಸಿದೆ.
ಪಟಾಕಿ ಸಿಡಿತದಿಂದ ಹೊರಬರುವ ಮಾಲಿನ್ಯದ ಕಣಗಳು ವಾತಾವರಣದಲ್ಲಿ ದೀರ್ಘಕಾಲ ಉಳಿದು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ಮುಂದಿನ ದೀಪಾವಳಿಗಳಲ್ಲಿ ಸಾರ್ವಜನಿಕರು ಮಾಲಿನ್ಯರಹಿತ ಆಚರಣೆಗಾಗಿ ಒತ್ತು ನೀಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ





