ಬೈಕ್ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಥಣಿಸಂದ್ರ ಬಳಿ ನಡೆದಿದೆ.
ಇಂದು ಬೆಳಗ್ಗೆ ಸಿಎಆರ್ ಹೆಡ್ ಕಾನ್ಸ್ಟೇಬಲ್ ನಾಗನಗೌಡ ಮಾಲಿಪಾಟೀಲ್ ಅವರು ತಮ್ಮ ಡಿಯೋ ಸ್ಕೂಟರ್‌ನಲ್ಲಿ ತನ್ನ ಮಗಳಾದ 2 ವರ್ಷದ ವರ್ಷಾ ಮತ್ತು ಅಣ್ಣನ ಮಗಳು 4 ವರ್ಷದ ಬಾನು ಅವರನ್ನು ನಿಲ್ಲಿಸಿಕೊಂಡು ಹೊರಟಿದ್ದರು.
ಥಣಿಸಂದ್ರದ ಪಿಟಿಎಸ್ ಕಡೆಯಿಂದ ಹೆಗಡೆನಗರದ ಕಡೆಗೆ ಹೋಗಲು ಸೆಂಟ್ರಲ್ ರೆವನ್ಯೂ ಲೇಔಟ್ ಮೈನ್ ರೋಡ್ ನಲ್ಲಿ ಹೋಗುವಾಗ, 3ನೇ ಕ್ರಾಸ್ ಕಡೆಯಿಂದ ಹಜ್ ಮೋನಿ ಸ್ಕೂಲ್ ಬಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖುದ್ದು ರಾಜಧರ್ಮ ಪಾಲಿಸಲಿಲ್ಲ ಮೋದಿಯವರು, ಹಿಮಂತರಿಗೆ ಹೇಗೆ ಉಪದೇಶ ನೀಡಬಲ್ಲರು ಪಾಪ?
ಮಕ್ಕಳ ಮೇಲೆ ಖಾಸಗಿ ಶಾಲಾ ಬಸ್ ಹರಿದ ಪರಿಣಾಮ ಇಬ್ಬರೂ ಸಾವಿಗೀಡಾಗಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಮೃತದೇಹ ಇರಿಸಲಾಗಿದೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾನ್‌ಸ್ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕ ಮಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.





