ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಕಾಯ್ದೆ ಮರು ಜಾರಿಯಾಗುವವರೆಗೆ ಹೋರಾಟ ಮುಂದುವಸುತ್ತೇವೆ. ʼಮನರೇಗಾ ಉಳಿಸಿ ಅಭಿಯಾನʼವನ್ನು ಜನಾಂದೋಲನವಾಗಿ ಪರಿವರ್ತಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಜ್ಞೆ ಮಾಡಿದರು.
ಬೆಂಗಳೂರು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ‘ನರೇಗಾ ಬಚಾವೋ ಸಂಗ್ರಾಮ’ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ವಿಬಿ ಜಿ ರಾಮ್ ಜಿ ಕಾಯ್ದೆ ರದ್ದಾಗಿ ಮನರೇಗಾ ಕಾಯ್ದೆ ಪುನರ್‌ಸ್ಥಾಪನೆ ಆಗುವವರೆಗೆ ಹೋರಾಟವನ್ನು ಮುಂದುವರಿಸಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
“ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯಲಿರುವ ಈ ಆಂದೋಲನ ಜನಾಂದೋಲನವಾಗಿ ಪರಿವರ್ತನೆಯಾಗಬೇಕು. ಉತ್ತರ ಭಾರತದಲ್ಲಿ ಕೃಷಿ ಕಾಯ್ದೆಗಳ ಬದಲಾವಣೆಗೆ ರೈತರು ಹೋರಾಡಿದಂತೆ ನಾವೂ ಕೂಡ ಹೋರಾಟ ಮಾಡಬೇಕು” ಎಂದರು.
“ಮನರೇಗಾ ಕಾಯ್ದೆ ರದ್ದು ಮಾಡಿರುವುದನ್ನು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರ ಮನರೇಗಾ ರದ್ದು ಮಾಡಿ, ವಿಬಿ ಜಿ ರಾಮ್ ಜಿ ಎಂಬ ಹೊಸ ಕಾಯ್ದೆಯನ್ನು ರೂಪಿಸಿದೆ. ಮಹಾತ್ಮ ಗಾಂಧಿ ಹೆಸರೆಂದರೆ ಬಿಜೆಪಿಯವರಿಗೆ ಅಲರ್ಜಿ” ಎಂದು ಹೇಳಿದರು.
“ಹಳೆ ಕಾಯ್ದೆ ಪ್ರಕಾರ ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ 365 ದಿನ ಕೆಲಸ ಕೇಳಬಹುದಾಗಿತ್ತು. ತಮ್ಮ ಊರಿನಲ್ಲಿ, ಜಮೀನಿನಲ್ಲಿಯೇ ಕೆಲಸ ಮಾಡಬಹುದಾಗಿತ್ತು. ಮೋದಿ ಸರ್ಕಾರ ಅದನ್ನು ಬದಲಾಯಿಸಿ ಹೊಸ ಕಾಯ್ದೆ ಜಾರಿಗೆ ತಂದಿದೆ. ಹೊಸ ಕಾಯ್ದೆಯಲ್ಲಿರುವ ರಾಮ, ದಶರಥ ರಾಮ, ಸೀತಾ ರಾಮ ಅಥವಾ ಕೌಶಲ ರಾಮನಲ್ಲ. ಅದು ಮಹಾತ್ಮಾ ಗಾಂಧಿ ಕೊಂದ ನಾಥೂರಾಮ” ಎಂದರು.
ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಗೋಪಿನಾಥ್ ಪಳನಿಯಪ್ಪನ್, ಮಯೂರ್ ಜೈಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಸಚಿವರಾದ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಎಂ.ಸಿ.ಸುಧಾಕರ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಎನ್. ಚಲುವರಾಯಸ್ವಾಮಿ, ಶಿವರಾಜ್ ತಂಗಡಗಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮತ್ತಿತರರು ಇದ್ದರು.
ಕೈಜೋಡಿಸದಿದ್ದರೆ ಹುದ್ದೆಗೆ ಕುತ್ತು: ಡಿಕೆಶಿ
“ನರೇಗಾ ಬಚಾವೊ ಹೋರಾಟದಲ್ಲಿ ಆಸಕ್ತಿ ತೋರಿಸದ ಪಕ್ಷದ ವೀಕ್ಷಕರು ಪದಾಧಿಕಾರಿಗಳನ್ನು ಹುದ್ದೆಯಿಂದ ಕಿತ್ತುಹಾಕಲಾಗುವುದು” ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
“ಸಂಸದರು, ಶಾಸಕರು, ಪರಿಷತ್ ಸದಸ್ಯರು ಇಲ್ಲದ ಕ್ಷೇತ್ರಗಳಲ್ಲಿ ಹೋರಾಟಕ್ಕೆ ಬಲ ನೀಡಲು ವೀಕ್ಷಕರನ್ನು ನೇಮಿಸಲಾಗಿದೆ. ಎಐಸಿಸಿ ನಿರ್ದೇಶನ ನೀಡಿರುವ ಎಲ್ಲ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಸೂಚನೆಯನ್ನು ಪಾಲಿಸದವರ ಬಗ್ಗೆ ವರದಿ ನೀಡುವಂತೆ ಎಐಸಿಸಿ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ. ಪಕ್ಷದಲ್ಲಿ ಸ್ಥಾನಮಾನ ಸಿಗಬೇಕೆಂದರೆ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು” ಎಂದು ಪಕ್ಷದ ಪ್ರಮುಖರಿಗೆ ಸೂಚಿಸಿದರು.
“ನರೇಗಾ ಉಳಿಸಿ ಹೋರಾಟದ ಭಾಗವಾಗಿ ನಡೆಯಲಿರುವ ಪಾದಯಾತ್ರೆಯ ನೇತೃತ್ವವನ್ನು ಸಚಿವರು, ಶಾಸಕರು ಹಾಗೂ ಪಕ್ಷದ ನಾಯಕರು ವಹಿಸಬೇಕು. ಎಲ್ಲಿ ಶಾಸಕರಿಲ್ಲವೊ ಆ ಕ್ಷೇತ್ರಗಳಲ್ಲಿ ನಾನು ಪಾದಯಾತ್ರೆ ಮಾಡುತ್ತೇನೆ. ವಿಶೇಷವಾಗಿ ಶಿಕಾರಿಪುರದಲ್ಲಿ ನಡೆಯುವ ಪಾದಯಾತ್ರೆಗೆ ನಾನು ಹೋಗುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಮನರೇಗಾ ಕಾಯ್ದೆ ಮುಂದುವರೆಸುವಂತೆ ಗ್ರಾ.ಪಂ. ಸದಸ್ಯರ ಒಕ್ಕೂಟ ಆಗ್ರಹ
“ಕೇಂದ್ರ ಪುರಸ್ಕೃತ ಯಾವುದೇ ಹೊಸ ಕಾಯಿದೆಗಳಿದ್ದರೂ ಕೂಡ ಅವುಗಳನ್ನು ಜಾರಿಗೊಳಿಸುವಾಗ ರಾಜ್ಯಗಳ ಜತೆಗೆ ಚರ್ಚಿಸಬೇಕು. ಆ ಯೋಜನೆಗೆ ಸಂಬಂಧಿಸಿದ ಆಯವ್ಯಯಗಳನ್ನು ನೀವು ಸಿದ್ಧಗೊಳಿಸಿಕೊಳ್ಳಬೇಕೆಂಬ ಮಾಹಿತಿಯನ್ನು ನೀಡಬೇಕು. ಆದರೆ ಯಾವುದೇ ಮಾಹಿತಿ ನೀಡದೆ, ಹಣಕಾಸು ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ನಾಲ್ಕು ತಿಂಗಳುಗಳಾದರೂ ಕೂಡ ಯಾವುದೇ ರಾಜ್ಯಗಳಿಗೆ ಮಾಹಿತಿ ನೀಡದೆ ಎರಡೇ ದಿನಗಳಲ್ಲಿ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಂವಿಧಾನದ ಆರ್ಟಿಕಲ್ 21, 258 ಮತ್ತು 280 ನೇರವಾಗಿ ಉಲ್ಲಂಘನೆಯಾಗಿದೆ. ಸಂವಿಧಾನದ ಹಕ್ಕುಗಳನ್ನು ರಾಜ್ಯ ಸರ್ಕಾರದಿಂದ ಕಿತ್ತುಕೊಳ್ಳುವ ಷಡ್ಯಂತ್ರ ಮಾಡಿರುವ ಕೇಂದ್ರದ ನಡೆ ಖಂಡನೀಯ. ಈ ಹಿನ್ನೆಲೆಯಲ್ಲಿ ಎಲ್ಲರೂ ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
‘ಕೈ’ ಹೋರಾಟದ ಹಾದಿ
“ಮನರೇಗಾ ಮರು ಜಾರಿ ಮತ್ತು ಹೊಸ ಕಾಯ್ದೆಯ ಅನಾನುಕೂಲಗಳ ಕುರಿತು ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ಮಾಡಲಾಗುವುದು, ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರಿಂದ ತಾಲೂಕು ಮಟ್ಟಗಳಲ್ಲಿ ಮುಖಂಡರಿಂದ ಮಾಧ್ಯಮಗೋಷ್ಟಿ ನಡೆಸಲಾಗುವುದು, ಇದೇ 26ರಿಂದ ಫೆಬ್ರವರಿ 7ರವರೆಗೆ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ 5ರಿಂದ 10 ಕಿಮೀ ಪಾದಯಾತ್ರೆ ನಡೆಸಲಾಗುವುದು, ಸ್ಥಳೀಯ ಮಟ್ಟದ ಕಾರ್ಯಕ್ರಮದಲ್ಲಿ ಎಲ್ಇಡಿ ಪರದೆಯಲ್ಲಿ ಸೋನಿಯಾ ಗಾಂಧಿಯ ಸಂದೇಶದ ಪ್ರಸಾರ ಮಾಡಲಾಗುವುದು, ಮನರೇಗಾ ಮರು ಜಾರಿಗೆ ಆಗ್ರಹಿಸಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಲಾಗುವುದು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು” ಎಂಬಂಥವು ಕಾಂಗ್ರೆಸ್ ಪಕ್ಷದ ಹೋರಾಟದ ಹಾದಿಯ ಅಂಶಗಳಾಗಿವೆ.





